ಗೋರಖ್ ಪುರ್: ಲಖಿಂಪುರ ರೈತರ ಮೇಲೆ ನಡೆದ ಹಿಂಸಾಚಾರದಲ್ಲಿ ಸಾಕ್ಷ್ಯಾಧಾರವಿಲ್ಲದೆ ಯಾರನ್ನೂ ಬಂಧಿಸುವ ಪ್ರಶ್ನೆಯೇ ಇಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಖಾಸಗಿ ಮಾಧ್ಯಮವೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕೇವಲ ಆರೋಪದ ಮೇಲೆ ನಾವು ಯಾರನ್ನೂ ಬಂಧಿಸುವುದಿಲ್ಲ ಎಂದು ಹೇಳಿದ್ದಾರೆ.
ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರನ್ನು ರಕ್ಷಿಸುವ ಪ್ರಯತ್ನ ಸರಕಾರ ನಡೆಸುತ್ತಿದೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು,ಈ ಆರೋಪ ಸಾಬೀತು ಮಾಡುವ ಯಾವುದೇ ವೀಡಿಯೋ ಇಲ್ಲ. ಪುರಾವೆಗಳಿದ್ದರೆ, ಅವರು ಅದನ್ನು ಅಪ್‌ಲೋಡ್ ಮಾಡಬಹುದು. ಸಾಕ್ಷ್ಯಾಧಾರಗಳಿಲ್ಲದೆ ನಮ್ಮ ಸರಕಾರ ಯಾರನ್ನು ಬಂಧಿಸುವುದಿಲ್ಲ, ಅಲ್ಲದೇ ಆರೋಪದ ಮೇಲೆ ನಾವು ಯಾರನ್ನೂ ಬಂಧಿಸುವುದಿಲ್ಲ. ಆದರೆ ಯಾರಾದರೂ ತಪ್ಪಿತಸ್ಥರಾಗಿದ್ದರೆ ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದರು.
ಇದೇ ವೇಳೆ ವಿಪಕ್ಷಗಳ ವಿರುದ್ಧ ಹರಿಹಾಯ್ದ ಯೋಗಿ ಆದಿತ್ಯನಾಥ್ ಲಖಿಂಪುರ ಖೇರಿಗೆ ಭೇಟಿ ನೀಡುತ್ತಿರುವ ಪ್ರತಿಪಕ್ಷಗಳಲ್ಲಿ ‘ಒಳ್ಳೆಯ ಸಂದೇಶ ವಾಹಕರಿಲ್ಲ’ , ಭೇಟಿಗೆ ತೆರಳಿದ ವಿಪಕ್ಷ ನಾಯಕರ ಅನೇಕ ಮುಖಗಳು ಹಿಂಸಾಚಾರದ ಹಿಂದಿದೆ ಎಂದು ಆರೋಪಿಸಿದರು.