ಪ್ರಜೆಗಳ ಜೀವಿಸುವ ಹಕ್ಕನ್ನು ಕಸಿಯುವ ಸರಕಾರ ನಮಗೆ ಬೇಡ

Prasthutha|

-ಡಾ.ಬಿ.ಪಿ.ಮಹೇಶ ಚಂದ್ರ ಗುರು

- Advertisement -

ಕೋವಿಡ್-19 ಸಂಕಷ್ಟ ಜಗತ್ತಿನ ಮುಂದೆ ಹಲವಾರು ಗಂಭೀರ ಸವಾಲುಗಳನ್ನು ಒಡ್ಡಿದೆ. ಇತಿಹಾಸ ನಮಗೆ ಬಹಳಷ್ಟು ಒಳ್ಳೆಯ ಪಾಠಗಳನ್ನು ನೀಡಿದೆಯಾದರೂ ಕಲಿಯುವ ಮನಸ್ಥಿತಿ ಆಳುವವರಿಗೆ ಕನಿಷ್ಠ ಪ್ರಮಾಣದಲ್ಲಿಯಾದರೂ ಇಲ್ಲದಿರುವುದು ನಮ್ಮ ಕಾಲದ ಬಹುದೊಡ್ಡ ದುರಂತವಾಗಿದೆ. ಕೊರೊನಾ ವೈರಾಣು ದೇವಾಧಿದೇವತೆಗಳು ಮತ್ತು ವೈದಿಕರ ಅಸ್ತಿತ್ವವನ್ನು ಗಾಳಿಗೆ ತೂರಿದೆ. ಆದಾಗ್ಯೂ ಕೌಮಾರಿಯಮ್ಮ ದೇವತೆಯನ್ನು ಸೃಷ್ಟಿಸಿ ಕೊರೊನಾ ಮಾರಿಯನ್ನು ಓಡಿಸುವೆವು ಎಂಬ ಭ್ರಮೆಯಿಂದ ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ತಾಲ್ಲೂಕಿನ ಮಧುವನಹಳ್ಳಿಯಲ್ಲಿ ಶ್ರೀಮತಿ ಯಶೋಧಮ್ಮ ಎಂಬ ಮಾಜಿ ಗ್ರಾಮಪಂಚಾಯಿತಿ ಅಧ್ಯಕ್ಷೆ ದೇವಾಲಯವನ್ನು ನಿರ್ಮಿಸಿರುವುದು ಮೌಢ್ಯದ ಪರಾಕಾಷ್ಠೆಯಾಗಿದೆ. ಇದನ್ನು ಮಾಧ್ಯಮಗಳಿಂದ ತಿಳಿದ ಪ್ರಜ್ಞಾವಂತ ಜಿಲ್ಲಾಧಿಕಾರಿ ಕೂಡಲೇ ದೇವಾಲಯವನ್ನು ನೆಲಸಮ ಮಾಡಿ ಪರಿಚ್ಛೇದ 51ರ ಅನ್ವಯ(ಮೌಢ್ಯ ನಿವಾರಣೆ ಮತ್ತು ವೈಚಾರಿಕತೆಯ ಉತ್ತೇಜನ) ಸೂಕ್ತ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ ಸಂಗತಿಯಾಗಿದೆ.

ಇಂತಹ ಮೌಢ್ಯಗಳನ್ನೇ ಬಂಡವಾಳ ಮಾಡಿಕೊಂಡು ಸುರಕ್ಷಿತವಾಗಿ ಕಂಠಪೂರ್ತಿ ಕುಡಿದು, ಹೊಟ್ಟೆ ತುಂಬ ಉಂಡು ಮತ್ತು ಬೇಕಾದಷ್ಟು ಹಣ ಮಾಡಿಕೊಂಡು ತಳಸಮುದಾಯಗಳನ್ನು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಶೋಷಣೆಗೆ ಗುರಿಪಡಿಸುತ್ತಿರುವ ವೈದಿಕರಿಂದಲೇ ಭಾರತ ಪ್ರಬುದ್ಧ ರಾಷ್ಟ್ರವಾಗಿ ರೂಪುಗೊಳ್ಳಲು ಸಾಧ್ಯವಾಗಿಲ್ಲ. ವೈದಿಕರೆಂಬುದು ಜಾತಿಯಲ್ಲ, ಅದೊಂದು ಇಡೀ ಜಗತ್ತನ್ನೇ ವ್ಯಾಪಿಸಿರುವ ಸ್ಥಾಪಿತ ಹಿತಾಸಕ್ತಿಗಳ ವರ್ಗ ಅಥವಾ ಮಾಫಿಯಾ. ದಲಿತರಲ್ಲಿ, ಹಿಂದುಳಿದವರಲ್ಲಿ ಮತ್ತು ಅಲ್ಪಸಂಖ್ಯಾತರಲ್ಲಿ ನವಬ್ರಾಹ್ಮಣರು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯುತ್ತಿರುವುದು ಅಪಾಯಕಾರಿ ಸಂಗತಿಯಾಗಿದೆ.

- Advertisement -

ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಸರಕಾರದ ಅಧಿಕಾರಿಗಳು ಮತ್ತು ಸಮುದಾಯ ಮುಖಂಡರು ತಾವು ಮೇಲ್ವರ್ಗದ ಗುಲಾಮರೆಂದು ತೋರಿಸಿಕೊಂಡು ಜುಜುಬಿ ಹುದ್ದೆಗಳು ಅಥವಾ ಬಡ್ತಿ ಅವಕಾಶಗಳನ್ನು ಪಡೆಯಲು ಹಣೆಯ ಮೇಲೆ ಕುಂಕುಮ, ಮೈಮೇಲೆ ಶನಿವಾರ, ಹೆಂಡಿರಿಗೆ ರೇಷ್ಮೆ ಸೇರಿ, ತಮಗೆ ಸೂಟು ಮೊದಲಾದವುಗಳನ್ನು ಧರಿಸಿ ಸಂಘಪರಿವಾರಿಗಳ(ಆರೆಸ್ಸೆಸ್ ಮುಖ್ಯಸ್ಥರನ್ನೂ ಒಳಗೊಂಡಂತೆ) ಕಾಲಿಗೆ ಬೀಳುವ ಘಟನಾವಳಿಗಳು ನಮಗೆ ತೀವ್ರ ಹೇಸಿಗೆ ಉಂಟುಮಾಡುತ್ತವೆ. ಸ್ವಯಂಘೋಷಿತ ಸಂವಿಧಾನತಜ್ಞ ಹೊಟ್ಟೆ ಪೈಲ್ವಾನ್ ಬಸ್ಯಾ ಕೂಡ ಇಂತಹವರಲ್ಲಿ ಪ್ರಮುಖರಾಗಿದ್ದಾರೆ. ಇವರ ಹೊಟ್ಟೆಯೇ ಮಹಾಶತ ಎಂಬ ಕನಿಷ್ಠ ಪ್ರಜ್ಞೆಯೂ ಕೂಡ ಇಂಥವರಿಗಿಲ್ಲ. ಹಿಂದೆ ಬಹಳಷ್ಟು ಜನ ಹಸಿದು ಸತ್ತರೆ, ಇಂದು ಬಹಳಷ್ಟು ಜನ ಉಂಡು ಸಾಯುತ್ತಿರುವುದು ನಮ್ಮ ಕಾಲದ ವಿಪರ್ಯಾಸವಾಗಿದೆ.

ಭಾರತೀಯ ಸಂವಿಧಾನ ಪರಿಚ್ಛೇದ-21 ಎಲ್ಲ ಪ್ರಜೆಗಳಿಗೂ ಜೀವಿಸುವ ಹಕ್ಕನ್ನು ನೀಡಿದೆ. ಎಲ್ಲರಿಗೂ, ಧರ್ಮಾತೀತವಾಗಿ, ಜಾತ್ಯತೀತವಾಗಿ, ಲಿಂಗಾತೀತವಾಗಿ ಹಾಗೂ ಪ್ರದೇಶಾತೀತವಾಗಿ ಅವಶ್ಯಕ ಜೀವನೋಪಾಯ ಮಾರ್ಗಗಳನ್ನು ನೀಡಿ ಸುರಕ್ಷಿತವಾಗಿ ಬದುಕುವ ಪರಿಸರ ಮತ್ತು ವ್ಯವಸ್ಥೆಗಳನ್ನು ರೂಪಿಸಬೇಕೆಂದು ಆಳುವವರಿಗೆ ಸಂವಿಧಾನ ಸ್ಪಷ್ಟವಾಗಿ ನಿರ್ದೇಶಿಸಿದೆ. ಇಂದು ನಮ್ಮನ್ನಾಳುವವರಿಗೆ ಪ್ರಜೆಗಳ ಜೀವಿಸುವ ಹಕ್ಕನ್ನು ರಕ್ಷಿಸುವುದಕ್ಕಿಂತ ವಾಮ ಮಾರ್ಗದಲ್ಲಿ ಅಧಿಕಾರ ಹಿಡಿದು ಉಳಿಸಿಕೊಂಡು ಹೋಗುವುದೇ ಪರಮಧ್ಯೇಯವಾಗಿರುವುದನ್ನು ಕೊರೊನಾ ಕೇಂದ್ರಿತ ವಿದ್ಯಮಾನಗಳು ಸ್ಪಷ್ಟಪಡಿಸಿವೆ. ಸಾರ್ವಜನಿಕ ಹಿತದೃಷ್ಟಿಯಿಂದ ವೈರಾಣು ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟಲು ಪ್ರಧಾನಿಯವರು ಕಳೆದ ವರ್ಷ ಲಾಕ್‌ಡೌನ್ ಘೋಷಣೆ ಮಾಡಿದ್ದು ಸರಿಯಾಗಿಯೇ ಇತ್ತು. ಆದರೆ ದೂರದೃಷ್ಟಿ, ಜೀವಪರ ಕಾಳಜಿ, ಸಾಮಾಜಿಕ ನ್ಯಾಯ ಮತ್ತು ಜೀವಿಸುವ ಹಕ್ಕಿಗೆ ಮಾನ್ಯತೆ ಮೊದಲಾದ ಆಶಯಗಳಿಗೆ ತದ್ವಿರುದ್ಧವಾದ ಲಾಕ್‌ ಡೌನ್‌ ನಿಂದಾಗಿ ಕಾಯಕ ಸಮುದಾಯಗಳು ಬೀದಿಗೆ ಬಿದ್ದು ಸಾಯುವ ಸ್ಥಿತಿ ನಿರ್ಮಿಸಿದ ಪ್ರಧಾನಿ ಮತ್ತು ಬಳಗ ನಮ್ಮ ದೇಶವನ್ನು ಆಳುವ ನೈತಿಕತೆಯನ್ನೇ ಕಳೆದುಕೊಂಡಿದೆ.

ಮೌಢ್ಯಕ್ಕೆ ಮತ್ತೊಂದು ಹೆಸರಾದ ಮೋದಿ ಬಳಗದ ಮೇಣದ ಬತ್ತಿ ಹಚ್ಚಿ, ತಟ್ಟೆ-ಲೋಟ ಹಿಡ್ಕಳಿ, ಬೀದಿಗೆ ಬಂದು ಜೋರಾಗಿ ಗಂಟೆ ಬಾರಿಸಿ, ಕೊರೊನಾ ಓಡಿಸಿ ಎಂದು ನೀಡಿದ ಕರೆ ವಿರಳಾತಿ ವಿರಳ ಮೂರ್ಖತನಕ್ಕೆ ಸಾಕ್ಷಿಯಾಗಿದೆ. ಆಳುವವರ ಇಂತಹ ಅವಿವೇಕ ಮತ್ತು ಹೊಣೆಗೇಡಿತನಗಳಿಂದಾಗಿ ಕೊರೊನಾ ವೈರಾಣು ದಾಳಿಗಿಂತ ಜೀವನೋಪಾಯ ಮಾರ್ಗಗಳಿಂದ ವಂಚಿತರಾಗಿ ಬೀದಿಯಲ್ಲಿ ಬಿದ್ದು ಅನಾಥರಾಗಿ ಸತ್ತವರ ಸಂಖ್ಯೆ ಭಾರತದಲ್ಲಿ ಹೆಚ್ಚಾಗಿರುವುದನ್ನು ಮಾನವ ಹಕ್ಕುಗಳ ಪ್ರತಿಪಾದಕರು ಜಗತ್ತಿನಾದ್ಯಂತ ನೋವಿನಿಂದ ಗಮನಿಸಿದ್ದಾರೆ. ಮಾನವ ಹಕ್ಕುಗಳನ್ನು ಹೃದಯ ಹೀನರಾಗಿ ಬಹುದೊಡ್ಡ ಪ್ರಮಾಣದಲ್ಲಿ ಉಲ್ಲಂಘಿಸಿದ ಟ್ರಂಪ್-ಮೋದಿ ಜೋಡಿ ಜಾಗತಿಕವಾಗಿ ಜಾತಿಗೆಟ್ಟಿದೆ. ಪ್ರಜ್ಞಾವಂತ ಅಮೆರಿಕನ್ನರು ಟ್ರಂಪ್‌ ಗೆ ಸರಿಯಾದ ರೀತಿಯಲ್ಲಿ ಪಾಠ ಕಲಿಸಿ ತಮ್ಮ ಮರ್ಯಾದೆಯನ್ನು ಉಳಿಸಿಕೊಂಡಿದ್ದಾರೆ. ಆದರೆ ಭಾರತದಲ್ಲಿ ಮಾನಗೆಟ್ಟವರೇ ದೇಶಕ್ಕೆ ದೊಡ್ಡವರು ಎಂಬ ಹೀನಾಯ ಸ್ಥಿತಿ ನಿರ್ಮಾಣಗೊಂಡಿದೆ. ಆದಾಗ್ಯೂ ಪಶ್ಚಿಮ ಬಂಗಾಳ, ಕೇರಳ ಮತ್ತು ತಮಿಳುನಾಡಿನ ಇತ್ತೀಚಿನ ಚುನಾವಣಾ ಫಲಿತಾಂಶಗಳು ಪ್ರಜಾಸತ್ತೆಯ ದೃಷ್ಟಿಯಿಂದ ಆಶಾದಾಯಕವಾಗಿವೆ.

ಪ್ರಧಾನಿ ಮೋದಿಜಿ ತಮ್ಮ ಗೆಟಪ್ಪು-ಸೆಟಪ್ಪುಗಳಿಗೆ ನೀಡಿರುವಷ್ಟು ಮಹತ್ವಗಳನ್ನು ಕೊರೊನಾ ನಿಯಂತ್ರಣ ಮತ್ತು ಬಡತನ ನಿರ್ಮೂಲನೆಗೆ ನೀಡಿಲ್ಲದಿರುವುದು ಅನುಭವವೇದ್ಯವಾಗಿದೆ. ಕೊರೊನಾ ಮೊದಲ ಅಲೆ ಸಂದರ್ಭದಲ್ಲಿ ಅಲಕ್ಷಿತ ಜನವರ್ಗಗಳಿಗೆ ವಿಶೇಷ ಆರ್ಥಿಕ ಪ್ಯಾಕೇಜ್, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ, ಆರೋಗ್ಯ ಮೂಲ ಸೌಕರ್ಯಗಳ ಅಭಿವೃದ್ಧಿ, ವಿಶೇಷ ವೈದ್ಯಕೀಯ ಮತ್ತು ತಾಂತ್ರಿಕ ಸಿಬ್ಬಂದಿ ನೇಮಕಾತಿ, ಕೋವಿಡ್ ಆಸ್ಪತ್ರೆಗಳ ನಿರ್ಮಾಣ, ಅತ್ಯಾಧುನಿಕ ತಪಾಸಣೆ ಸೌಕರ್ಯ, ಆಮ್ಲಜನಕ ಉತ್ಪಾದನೆ ಸೌಲಭ್ಯ, ಆಮ್ಲಜನಕ ಸಹಿತ ಹಾಸಿಗೆ, ವೆಂಟಿಲೇಟರ್‌ ಗಳು, ವೈದ್ಯಕೀಯ ಕಿಟ್‌ ಗಳು ಮೊದಲಾದವುಗಳನ್ನು ಆಧುನಿಕ ಸಂತರೆ ಅದು ಪೋಜು ಕೊಡುವ ಪ್ರಧಾನಿ ಮೋದಿಜಿ ಪ್ರಜ್ಞಾಪೂರ್ವಕವಾಗಿ ಒದಗಿಸಿದ್ದರೆ ಮಿಲಿಯಾಂತರ ಜನರು ವೈರಾಣುವಿನ ಸೋಂಕು ಮತ್ತು ಲಕ್ಷಾಂತರ ಜನರು ಸಾವಿನಿಂದ ಪಾರಾಗುತ್ತಿದ್ದರು. ಕೊರೊನಾ ಎರಡನೇ ಅಲೆಯ ತೀವ್ರತೆ ಮತ್ತು ಕಷ್ಟ-ನಷ್ಟಗಳನ್ನು ಸರಕಾರ ಸಕಾಲಿಕ ಕ್ರಮಗಳನ್ನು ಕೈಗೊಂಡಿದ್ದರೆ ಖಂಡಿತವಾಗಿಯೂ ತಪ್ಪಿಸಬಹುದಿತ್ತು. ನಮ್ಮ ಹಿಂದಿನ ಮುತ್ಸದ್ದಿಗಳಾದ ಗಾಂಧಿ, ನೆಹರು, ಅಂಬೇಡ್ಕರ್, ಲೋಹಿಯಾ ಮೊದಲಾದವರು ಬಡತನ ನಿರ್ಮೂಲನೆಗೆ ಬದ್ಧರಾಗಿದ್ದರೆ, ಇಂದಿನವರು ಬಡವರ ನಿರ್ಮೂಲನೆಯತ್ತ ಸಾಗಿರುವುದು ರಾಷ್ಟ್ರೀಯ ದುರಂತವೇ ಆಗಿದೆ. ಇಂದು ಭಾರತದ ಬಹುಜನರು ಜೀವಿಸುವ ಹಕ್ಕನ್ನು ಕಸಿಯುವ ಪ್ರಧಾನಿ ಮೋದಿಜಿ ಸರಕಾರದ ಬಲಿಪಶುಗಳಾಗಿದ್ದರೆ, ಮೋ-ಶಾ-ಯೋ ಬಳಗದ ಕೆಲವೇ ಮಂದಿ ವೈದಿಕರು, ವೈಶ್ಯರು, ಆಡಳಿತಗಾರರು ಮತ್ತು ಚಮಚಾಗಳು ಮಾತ್ರ ಸುರಕ್ಷಿತವಾಗಿದ್ದಾರೆ ಮತ್ತು ಪ್ರಕಾಶಿಸುತ್ತಿದ್ದಾರೆ.

ಕೊರೊನಾ ಸಂದರ್ಭದಲ್ಲಿ ದೆಹಲಿ, ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯ ಸರಕಾರಗಳು ಆಡಳಿತಕ್ಕೆ ಅತ್ಯವಶ್ಯಕವಾದ ಮಾನವ ಸ್ಪರ್ಶವನ್ನು ನೀಡಿ ಪ್ರಜೆಗಳ ಜೀವಿಸುವ ಹಕ್ಕನ್ನು ರಕ್ಷಿಸುವ ಸಲುವಾಗಿ ವಿಶೇಷವಾಗಿ ಸಾಮಾಜಿಕ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿವೆ. ಪ್ರಜೆಗಳಿಗೆ ಜೀವನೋಪಾಯ ಮಾರ್ಗಗಳನ್ನು ಕಲ್ಪಿಸುವುದರ ಜೊತೆಗೆ ಅನ್ನಭಾಗ್ಯ ಯೋಜನೆ, ಸ್ವಯಂ ಉದ್ಯೋಗ ಯೋಜನೆ, ವಿಶೇಷ ಆರ್ಥಿಕ ಪ್ಯಾಕೇಜ್, ಆರೋಗ್ಯ ಸೌಲಭ್ಯಗಳ ವಿಸ್ತರಣೆ, ಕೊರೊನಾ ವಾರಿಯರ್ ಗಳ ರಕ್ಷಣೆ ಮೊದಲಾದ ಸಕಾರಾತ್ಮಕ ಕ್ರಮಗಳ ಮೂಲಕ ಪ್ರಧಾನಿ ಮೋದಿಜಿ ಸರಕಾರಕ್ಕಿಂತ ಮಿಗಿಲಾದ ಉತ್ತಮ ಆಡಳಿತ ನೀಡಿವೆ. ಇದನ್ನು ಗುರುತಿಸಿದ ಪ್ರಜ್ಞಾವಂತ ಮತದಾರರು ಮೋದಿಯವರ ಮನ್ ಕಿ ಬಾತ್ ಬರಿ ಬೊಗಳೆಯೆಂದು ಅರಿತು ಪ್ರಾದೇಶಿಕ ಪಕ್ಷಗಳು ಮತ್ತು ಎಡಪಕ್ಷಗಳನ್ನು ಗೆಲ್ಲಿಸಿ ತಮ್ಮ ರಾಜಕೀಯ ಪ್ರಬುದ್ಧತೆಯನ್ನು ಅಭಿವ್ಯಕ್ತಗೊಳಿಸಿದ್ದಾರೆ. ಭಾರತೀಯ ಪ್ರಜಾಸತ್ತೆ, ಸಂವಿಧಾನ ಮತ್ತು ಬಹುತ್ವಗಳ ಮುಂದೆ ಸಂಘಪರಿವಾರಿಗಳ ಏಕತ್ವ ಮತ್ತು ಜೋರ್ ಸೇ ಬೊಲೊ ಜೈಶ್ರೀರಾಮ್ ಘೋಷಣೆಗಳು ಇನ್ನು ಮುಂದೆ ಭಾರತದಲ್ಲಿ ನಡೆಯುವುದಿಲ್ಲ ಎಂಬ ಸತ್ಯವನ್ನು ಜನರು ಅರಿತಿದ್ದಾರೆ. ಮನೆಯಲ್ಲಿ ಅನ್ನವಿಲ್ಲದೇ, ಆಸ್ಪತ್ರೆಯಲ್ಲಿ ಔಷಧೋಪಚಾರವಿಲ್ಲದೆ ಮತ್ತು ಸ್ಮಶಾನದಲ್ಲಿ ಶವಸಂಸ್ಕಾರಕ್ಕೂ ವ್ಯವಸ್ಥೆಯಿಲ್ಲದ ದಯನೀಯ ಸ್ಥಿತಿಗೆ ಭಾರತವನ್ನು ದಬ್ಬಿದ ಕುಖ್ಯಾತಿಯನ್ನು ಮೋದಿ ಮತ್ತು ಬಳಗ ಹೊಂದಿದೆ. ಉದ್ದನೆಯ ಗಡ್ಡಬಿಟ್ಟ ಕೂಡಲೇ ಮೋದಿಜಿ ಮತ್ತೊಬ್ಬ ವಾಲ್ಮೀಕಿ, ಕಬೀರ, ನಾನಕ್ ಮತ್ತು ಠ್ಯಾಗೋರ್ ಆಗಲೂ ಸಾಧ್ಯವಿಲ್ಲವೆಂಬುದೇ ಇಂದಿನ ಜನ್ ಕಿ ಚಿಂತನ್ ಆಗಿದೆ!

ಇನ್ನು ಮುಂದೆ ಭಾರತದಲ್ಲಿ ಕಾಶಿಯ ಗಡ್ಡಪ್ಪ ಶ್ರೀ, ಗುಜರಾತಿನ ಗುಡ್ಡಪ್ಪ ಶ್ರೀ, ಗೋರಖ್‌ ಪುರದ ಭೋಗಪ್ಪ ಶ್ರೀ, ಶಿಕಾರಿಪುರದ ಕುಂಕುಮಶ್ರೀ, ಶಿವಮೊಗ್ಗದ ನೋಟುಶ್ರೀ ಮೊದಲಾದವರ ಆಟ ರಾಜಕೀಯವಾಗಿ ನಡೆಯಲ್ಲ, ಕರ್ನಾಟಕ ರಾಜ್ಯ ಕೊರೊನಾ ಎರಡನೇ ಅಲೆಯಲ್ಲಿ ಅಧಿಕ ಪ್ರಮಾಣದ ಸೋಂಕು ಮತ್ತು ಸಾವುಗಳಿಂದ ಭಾರತದಲ್ಲಿ ಮೊದಲನೇ ಸ್ಥಾನಕ್ಕೆ ಏರಲು ಕುಂಕುಮಶ್ರೀಗಳ ನೇತೃತ್ವದ ಸರಕಾರದ ವೈಫಲ್ಯ ಬಹುಮುಖ್ಯ ಕಾರಣವಾಗಿದೆ. ರಾಜ್ಯದ ಜನತೆಗೆ ಕಾನೂನು, ಸುರಕ್ಷತೆ, ಸುವ್ಯವಸ್ಥೆ, ಸುಗಮ ಆಡಳಿತ, ಒಳಗೊಳ್ಳುವ ಅಭಿವೃದ್ಧಿ ದೃಷ್ಟಿಯಿಂದ ದ್ರೋಹ ಬಗೆದಿರುವ ಕರ್ನಾಟಕ ರಾಜ್ಯ ಸರಕಾರ ಆಳುವ ನೈತಿಕತೆಯನ್ನು ಕಳೆದುಕೊಂಡಿವೆ. ಅಷ್ಟೇ ಅಲ್ಲ, ಒಂದು ಕಾಲದ ಶಾಂತಿಯ ಬೀಡು ಹಾಗೂ ಕಲ್ಯಾಣ ಕರ್ನಾಟಕವೆಂದೇ ದೇಶದಲ್ಲಿ ಗೌರವಿಸಲ್ಪಟ್ಟಿದ್ದ ನಮ್ಮ ರಾಜ್ಯ ಹಿಂದೂ ಮೂಲಭೂತವಾದದ ಪ್ರಯೋಗಶಾಲೆಯಾಗಿ ಪರಿವರ್ತನೆಗೊಳ್ಳಲು ನಳೀನ್‌ ಕುಮಾರ್ ಕಟೀಲ್, ಪ್ರತಾಪ್‌ ಸಿಂಹ, ಅನಂತಕುಮಾರ್ ಹೆಗ್ಡೆ, ಪ್ರಮೋದ್ ಮುತಾಲಿಕ್, ಚಕ್ರವರ್ತಿ ಸೂಲಿಬೆಲೆ, ತೇಜಸ್ವಿ ಸೂರ್ಯ ಮೊದಲಾದ ಉಗ್ರಶ್ರೀಗಳು ನೇರವಾಗಿ ಕಾರಣರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ವಜನಾಂಗಗಳ ಸಮಾನತೆ, ಸುರಕ್ಷತೆ ಮತ್ತು ಪ್ರಗತಿಗೆ ಪೂರಕವಾಗಿ ದುಡಿಯುವ ಬದ್ಧತೆ ಮತ್ತು ಸಾಮರ್ಥ್ಯಗಳನ್ನು ನಿಚ್ಛಳವಾಗಿ ಸಾಬೀತುಪಡಿಸಿರುವ ಹಾಗೂ ರಾಜ್ಯದ ಜನತೆಗೆ ಹಗರಣ ರಹಿತ ಸರಕಾರ ನೀಡಿರುವ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹಾವಲಸೆ ಜರುಗುವುದು ಔಚಿತ್ಯಪೂರ್ಣವಾಗಿದೆ.

ಭಾರತೀಯ ಸ್ವಾತಂತ್ರ್ಯ ಸಂಗ್ರಾಮ ಮತ್ತು ತುರ್ತುಪರಿಸ್ಥಿತಿ ಕಾಲದಲ್ಲಿ ಐತಿಹಾಸಿಕ ಪಾತ್ರವಹಿಸಿದ ಮಾಧ್ಯಮಗಳು ಇಂದು ಸಂವಿಧಾನ ವಿರೋಧಿಗಳು ಮತ್ತು ಸಾಮಾಜಿಕ ನ್ಯಾಯ ವಿರೋಧಿಗಳ ಮಾಲೀಕತ್ವ, ಏಕಸ್ವಾಮ್ಯ ಮತ್ತು ನಿರ್ದೇಶನಗಳಡಿಯಲ್ಲಿ ನಿರ್ವೀರ್ಯವಾಗಿವೆ. ಈ ಮಾತು ಪ್ರಮುಖ ರಾಷ್ಟ್ರೀಯ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಿಗೆ ಖಂಡಿತ ಅನ್ವಯಿಸುವುದಿಲ್ಲ.

ಸಮಕಾಲೀನ ಮಾಧ್ಯಮಗಳಲ್ಲಿ ಮಹಿಳೆಯರು ಮತ್ತು ದಮನಿತ ವರ್ಗಗಳ ಪರ ವಕಾಲತ್ತು ವಹಿಸುವ ವೃತ್ತಿಪರರ ಸಂಖ್ಯೆ ನಗಣ್ಯವೆಂದೇ ಹೇಳಬಹುದು. ಪ್ರಭುತ್ವದ ಪರ ತುತ್ತೂರಿ ಊದಿ ಮಾಧ್ಯಮಗಳ ಮಂದಿ ಪ್ರಸ್ತುತ ಸಂದರ್ಭದಲ್ಲಿ ಭಾರತದಲ್ಲಿ ನಿಜಕ್ಕೂ ಬೆತ್ತಲಾಗಿದ್ದಾರೆ. ಪುಡಿಗಾಸು ಮತ್ತು ಚಿಲ್ಲರೆ ಲಾಭಗಳಿಗೆ ಮಾರುಕಟ್ಟೆ ಶಕ್ತಿಗಳ ನಿಯಂತ್ರಣದಲ್ಲಿರುವ ಪ್ರಜಾಸತ್ತೆ ಮತ್ತು ಮಾಧ್ಯಮಗಳ ಸಾಮಾಜಿಕ ನ್ಯಾಯವಿರೋಧಿಗಳು ಅಂಬೇಡ್ಕರ್ ಹೇಳಿದಂತೆ ಹುಟ್ಟುವು ದಕ್ಕಿಂತ ತಾಯಿಯ ಗರ್ಭದಲ್ಲೇ ಸತ್ತಿದ್ದರೆ ಮನುಕುಲ ಮತ್ತು ಪರಿಸರಗಳಿಗೆ ಎಷ್ಟೋ ಒಳಿತುಂಟಾಗುತ್ತಿತ್ತು ಅಲ್ಲವೇ?

ಭಾರತದಲ್ಲಿ ನೆಹರು-ಗಾಂಧಿ ಕುಟುಂಬವನ್ನು ಹೊರತುಪಡಿಸಿದ ಕಾಂಗ್ರೆಸ್ ಪಕ್ಷದ ನಾಯಕತ್ವ ಮತ್ತು ಪುನರುಜ್ಜೀವನ ಪ್ರಸ್ತುತ ಸಂದರ್ಭದಲ್ಲಿ ಅನಿವಾರ್ಯವಾಗಿದೆ. ಮನಮೋಹನ್‌ ಸಿಂಗ್, ಶರದ್‌ ಪವಾರ್, ಮಮತಾ ದೀದಿ, ಆಂಟೋನಿ, ಕ್ಯಾಪ್ಟನ್ ಅಮರಿಂದರ್ ಸಿಂಗ್, ದಿಗ್ವಿಜಯ್‌ ಸಿಂಗ್ ಇಂತಹ ಸಮರ್ಥರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲ ಬಣಗಳು ರಾಜಕೀಯವಾಗಿ ಒಗ್ಗೂಡಬೇಕು. ಕಾಂಗ್ರೆಸ್, ಎಡಪಕ್ಷಗಳು, ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ದಲಿತ ಸಂಘಟನೆಗಳು ಮೊದಲಾದವುಗಳು ಸೈದ್ಧಾಂತಿಕವಾಗಿ(ಬಹುತ್ವ, ಸಮಾಜವಾದ, ಧರ್ಮನಿರಪೇಕ್ಷತೆ ಇತ್ಯಾದಿ) ಒಗ್ಗೂಡಿ ಭಾರತದ ಪ್ರಜಾಸತ್ತೆಯನ್ನು ರಕ್ಷಿಸುವ ಅನಿವಾರ್ಯತೆ ಎಂದಿಗಿಂತ ಇಂದು ಹೆಚ್ಚಾಗಿದೆ. ಬಿಜೆಪಿಗೆ ಪರ್ಯಾಯವಾದ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ದಲಿತರ ಬೆಂಬಲ ಹೊಂದಿರುವ ಬಿಎಸ್‌ ಪಿ, ಮುಸಲ್ಮಾನರ ಬೆಂಬಲ ಹೊಂದಿರುವ ಎಸ್‌ ಡಿಪಿಐ, ಕಾರ್ಮಿಕರ ಬೆಂಬಲ ಹೊಂದಿರುವ ಎಡಪಕ್ಷಗಳು ಮತ್ತು ರೈತರ ಬೆಂಬಲ ಹೊಂದಿರುವ ರೈತ ಸಂಘಟನೆಗಳನ್ನು ಯಾವುದೇ ಕಾರಣಕ್ಕೂ ರಾಷ್ಟ್ರೀಯ ಹಿತದೃಷ್ಟಿಯಿಂದ ರಾಜಕೀಯವಾಗಿ ನಿರ್ಲಕ್ಷಿಸಬಾರದು. ಅಷ್ಟೇ ಅಲ್ಲ ಬಿಜೆಪಿಯ ಬಿ-ಟೀಮ್‌ ಗಳೆಂದೇ ಕುಖ್ಯಾತರಾಗಿರುವ ದೊಡ್ಡಗೌಡರ ಕೌಟುಂಬಿಕ ದಳ ಮತ್ತು ಓವೈಸಿಯವರ ಸಂಘಟನೆಗಳನ್ನು ದೂರವಿಟ್ಟೆ ರಾಜಕಾರಣ ಮಾಡಬೇಕು.

ಭಾರತೀಯರ ಜೀವಿಸುವ ಹಕ್ಕನ್ನು ಕಸಿದುಕೊಂಡಿರುವ ಮೋದಿ ಪ್ರಭುತ್ವದಿಂದ ಭಾರತೀಯ ಪ್ರಜಾಸತ್ತೆ ಮತ್ತು ಸಂವಿಧಾನಗಳನ್ನು ರಕ್ಷಿಸುವ ಕಾರ್ಯಸೂಚಿಯನ್ನು ಆಧರಿಸಿದ ಮಹಾಘಟ ಬಂಧನ್ ಇಂದು ನಮಗಿರುವ ಏಕೈಕ ಬಿಡುಗಡೆಯ ಮಾರ್ಗವಾಗಿದೆ. ಪಶ್ಚಿಮ ಬಂಗಾಳದಲ್ಲಿ ಮೋದಿ ರಥಯಾತ್ರೆ ಮುಗ್ಗರಿಸಲು ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳು ಮಾಡಿರುವ ಅಮೂಲ್ಯ ರಾಜಕೀಯ ತ್ಯಾಗ ಬಹು ಮುಖ್ಯ ಕಾರಣವಾಗಿದೆ.

ವಿವಿಧ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಅಧಿಕೃತವಾಗಿ ನಿಲ್ಲಿಸಿದ್ದರೂ ಸಹ ಇವರು ಮತ ಹಾಕಿದ್ದು ಮಮತಾ ದೀದಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಗೆ ಎಂಬುದು ಐತಿಹಾಸಿಕ ಸತ್ಯ.



Join Whatsapp