ಅಫ್ಘಾನಿಸ್ತಾನವನ್ನು ಮುನ್ನಡೆಸಲು ಸರ್ಕಾರಕ್ಕಿಂತ ನಾವು ಅರ್ಹರು: ತಾಲಿಬಾನ್ ವಕ್ತಾರ

Prasthutha|

ದುಬೈ: ಪ್ರಸ್ತುತ ಆಡಳಿತ ನಡೆಸುತ್ತಿರುವ ಕಾಬೂಲ್ ಸರ್ಕಾರಕ್ಕಿಂತ ತಾಲಿಬಾನ್, ಅಫ್ಘಾನಿಸ್ತಾನದಲ್ಲಿ ಭವಿಷ್ಯದ ಆಡಳಿತ ನೀಡಲು ಹೆಚ್ಚು ಅರ್ಹತೆ ಹೊಂದಿದೆ ಎಂದು ತಾಲಿಬಾನ್ ವಕ್ತಾರರು ಬುಧವಾರ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಹಿಂಸಾಚಾರದ ಉಲ್ಬಣ ಮತ್ತು ಭವಿಷ್ಯದ ಬಗ್ಗೆ ಹೆಚ್ಚುತ್ತಿರುವ ಅನುಮಾನಗಳ ನಡುವೆ ಯುಎಸ್ ಬೆಂಬಲಿತ ಶಾಂತಿ ಮಾತುಕತೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಈ ಹೇಳಿಕೆ ಮಹತ್ವ ಪಡೆದಿದೆ.

- Advertisement -

ಕಳೆದ ವಾರ ತಾಲಿಬಾನ್ ಅಧಿಕಾರಿಯೊಬ್ಬರು, ಅಫ್ಘಾನಿಸ್ತಾನದ 85 ಪ್ರತಿಶತದಷ್ಟು ಭೂಪ್ರದೇಶವನ್ನು ನಾವು ಹಿಡಿತಕ್ಕೆ ತೆಗೆದುಕೊಂಡಿದ್ದೇವೆ ಎಂದು ಹೇಳಿಕೆ ನೀಡಿದ್ದರು.
ಸುಮಾರು 20 ವರ್ಷಗಳ ಹೋರಾಟದ ನಂತರ ಯುಎಸ್ ಸೇರಿದಂತೆ ವಿದೇಶಿ ಪಡೆಗಳು ಅಫಘಾನಿಸ್ತಾನ ತೊರೆದುದರಿಂದ ತಾಲಿಬಾನ್ ಕಡೆಯಿಂದ ಕೇವಲ ಪ್ರಚಾರಕ್ಕಾಗಿ ಈ ಹೇಳಿಕೆಯನ್ನು ನೀಡಿದೆಯೆಂದು ಕಾಬೂಲ್ ಸರ್ಕಾರ ತಾಲಿಬಾನ್ ವಾದವನ್ನು ತಳ್ಳಿಹಾಕಿದೆ.

ಅಫ್ಘಾನ್ ಭದ್ರತಾ ಪಡೆಗಳೊಂದಿಗೆ “ಶಸ್ತ್ರಾಸ್ತ್ರ ಮತ್ತು ಅತ್ಯಾಧುನಿಕ ಆಯುಧಗಳು ಲಭ್ಯವಿದ್ದರೂ ಪ್ರತಿದಿನ ಹತ್ತಾರು ಜಿಲ್ಲೆಗಳನ್ನು ನಾವು ವಶಪಡಿಸುತ್ತಿದ್ದೇವೆ ಎಂದು ತಾಲಿಬಾನ್ ವಕ್ತಾರರಾದ ಸುಹೇಲ್ ಶಾಹೀನ್ ಸ್ಪಷ್ಟಪಡಿಸಿದ್ದಾರೆ.
ಕಳೆದ ಎರಡು ವಾರಗಳಲ್ಲಿ ತಾಲಿಬಾನ್ ಪಡೆ ಇರಾನ್, ತಜಿಕಿಸ್ತಾನ್, ತುರ್ಕಮೆನಿಸ್ತಾನ್, ಚೀನಾ ಮತ್ತು ಪಾಕಿಸ್ತಾನ ಸೇರಿದಂತೆ ಐದು ದೇಶಗಳ ಗಡಿಯಲ್ಲಿರುವ ಪ್ರದೇಶಗಳನ್ನು ಆಕ್ರಮಿಸಿದೆ.

- Advertisement -

ತಾವು ವಶಪಡಿಸುತ್ತಿರುವ ಪ್ರದೇಶಗಳ ದಿನನಿತ್ಯದ ವ್ಯವಹಾರಗಳನ್ನು ನಡೆಸಲು ತಾಲಿಬಾನ್ ಪಡೆ ಪರಿಣತಿ ಮತ್ತು ಬಜೆಟ್ ಹೊಂದಿದೆಯೇ ಎಂದು ಸುಹೇಲ್ ರವರಲ್ಲಿ ಕೇಳಿದಾಗ “ನಾವು ಅಫ್ಘಾನಿಸ್ತಾನದ ಜನರ ನಡುವೆ ಕಳೆದ 25 ವರ್ಷಗಳಿಂದ ವಾಸಿಸುತ್ತಿದ್ದೇವೆ. ನಮ್ಮಲ್ಲಿ ರಾಜ್ಯಪಾಲರು, ಭದ್ರತಾ ಮುಖ್ಯಸ್ಥರು, ಪ್ರಾಂತೀಯ ಭದ್ರತಾ ಮುಖ್ಯಸ್ಥರು, ನ್ಯಾಯಾಧೀಶರು ಮತ್ತು ಸಚಿವಾಲಯಕ್ಕೆ ಸಮಾನವಾದ ಎಲ್ಲಾ ಆಯೋಗಗಳು ಇವೆ. ಆದ್ದರಿಂದ ಎಲ್ಲಾ ಕ್ಷೇತದಲ್ಲಿ ಪರಿಣತಿ ಹೊಂದಿದ ಅನುಭವವಿದೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಕಾಬೂಲ್ ಆಡಳಿತದಲ್ಲಿರುವವರಿಗಿಂತ ತಾಲಿಬಾನ್ ಹೆಚ್ಚು ಅರ್ಹರು ಮತ್ತು ಪರಿಣಾಮಕಾರಿಗಳು. ಮಾತ್ರವಲ್ಲದೇ ತಾಲಿಬಾನ್ ವಶಪಡಿಸಿಕೊಂಡ ಪ್ರದೇಶಗಳಲ್ಲಿನ ಶಾಲೆಗಳು, ಕಚೇರಿಗಳು ಮತ್ತು ಇತರ ಎಲ್ಲ ಸಂಸ್ಥೆಗಳನ್ನು ಮುಕ್ತವಾಗಿ ಮತ್ತು ಕಾರ್ಯನಿರ್ವಹಿಸುವಂತೆ ಕೇಳಿಕೊಳ್ಳಲಾಗಿದೆ ಎಂದು ಶಾಹೀನ್ ಹೇಳಿದರು.

ಆದಾಗ್ಯೂ ಸಾಮಾನ್ಯ ಜನರಿಗೆ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಮುಖ್ಯ ಜವಾಬ್ದಾರಿ ಎಂದು ಅವರು ಹೇಳಿದರು.
“ನಮ್ಮ ನಿಯಂತ್ರಣದಲ್ಲಿ ಸುಮಾರು 85 ಪ್ರತಿಶತದಷ್ಟು ಅಫಘಾನ್ ಪ್ರದೇಶವಿದೆ. ಆದ್ದರಿಂದ, ಈ ಎಲ್ಲಾ ಕಚೇರಿಗಳನ್ನು ಪರಿಣಾಮಕಾರಿ ಮತ್ತು ಸಕ್ರಿಯವಾಗಿಡಲು ನಮಗೆ ಹಣಕಾಸಿನ ನೆರವು ಬೇಕಾಗುತ್ತದೆ. ಈ ನಿಟ್ಟಿನಲ್ಲಿ ವಿಶ್ವಸಂಸ್ಥೆ, ಅಂತಾರಾಷ್ಟ್ರೀಯ ಸಮುದಾಯ ಮತ್ತು ಇತರ ದೇಶಗಳು ತಾಲಿಬಾನ್ ಆರ್ಥಿಕವಾಗಿ ಸಹಾಯ ಮಾಡುವಂತೆ ಶಾಹೀನ್ ಮನವಿ ಮಾಡಿದರು.

Join Whatsapp