ತಾಜ್ ಮಹಲ್ ಯಾರು ಕಟ್ಟಿದರು ಎಂದು ನಿರ್ಧರಿಸಲು ನಾವು ಇಲ್ಲಿ ಕುಳಿತಿಲ್ಲ: ಅಲಹಾಬಾದ್ ಹೈಕೋರ್ಟ್

Prasthutha|

►ವಿಶ್ವವಿಖ್ಯಾತ ಕಟ್ಟಡದ ಸಮೀಕ್ಷೆಗೆ ಕೋರಿದ್ದ ಅರ್ಜಿದಾರನನ್ನು ತೀವ್ರ ತರಾಟೆಗೆ ತೆಗೆದುಕೊಂಡ ನ್ಯಾಯಾಲಯ

- Advertisement -

ಲಕ್ನೋ: ವಿಶ್ವ ವಿಖ್ಯಾತ ತಾಜ್ ಮಹಲ್ ದೆಹಲಿ ಬಳಿಯ ಆಗ್ರಾದಲ್ಲಿರುವ ವಿಶ್ವವಿಖ್ಯಾತ ತಾಜ್ ಮಹಲ್ ನ ರಹಸ್ಯವಾಗಿರುವ ಕೊಠಡಿಗಳನ್ನು ತೆರೆಸಬೇಕು ಹಾಗೂ ಭಾರತೀಯ ಸರ್ವೇಕ್ಷಣಾ ಇಲಾಖೆಯಿಂದ ಸಮೀಕ್ಷೆ ನಡೆಸಲು ನಿರ್ದೇಶನ ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದ ಅರ್ಜಿದಾರರನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಅಲಹಾಬಾದ್ ಹೈಕೋರ್ಟ್ ನ ಲಕ್ನೋ ಪೀಠ, ತಾಜ್ ಮಹಲ್ ಯಾರು ಕಟ್ಟಿದರು ಎಂದು ನಿರ್ಧರಿಸಲು ನಾವು ಇಲ್ಲಿ ಕುಳಿತಿರುವುದಲ್ಲ, ಹೀಗೆ ಬಿಟ್ಟರೆ ನೀವು ನಾಳೆ ನ್ಯಾಯಾಧೀಶರ ಚೇಂಬರ್ ಗೂ ಬರಬಹುದು ಎಂದು ಕಿಡಿಕಾರಿದೆ.


ಅರ್ಜಿದಾರರಾಗಿರುವ ಬಿಜೆಪಿ ಅಯೋಧ್ಯೆ ಘಟಕದ ಮಾಧ್ಯಮ ವಿಭಾಗದ ಉಸ್ತುವಾರಿ ಡಾ.ರಜ್ ನೀಶ್ ಸಿಂಗ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಪೀಠ, ಇಂತಹ ಚರ್ಚೆಗಳು ಡ್ರಾಯಿಂಗ್ ರೂಮ್ ನಲ್ಲಿ ನಡೆಯಬೇಕೆ ಹೊರತು ನ್ಯಾಯಾಲಯದ ಕೊಠಡಿಯಲ್ಲಿ ಅಲ್ಲ ಎಂದು ಹೇಳಿತು.

- Advertisement -

ನ್ಯಾಯಮೂರ್ತಿಗಳಾದ ಡಿ.ಕೆ.ಉಪಾಧ್ಯಾಯ ಮತ್ತು ಸುಭಾಷ್ ವಿದ್ಯಾರ್ಥಿ ಅವರನ್ನು ಒಳಗೊಂಡ ಪೀಠ ಅರ್ಜಿದಾರರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ನೀವು ನಂಬುವ ಇತಿಹಾಸವನ್ನು ನಮ್ಮ ಮೇಲೆ ಹೇರಬೇಡಿ ಎಂದು ನ್ಯಾಯಾಧೀಶರು ಹೇಳಿದರು.

ಮಾಹಿತಿ ಹಕ್ಕು” ಕುರಿತು ಅರ್ಜಿದಾರರ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, “ತಾವು ಕೋರಿರುವ ಅಧ್ಯಯನಕ್ಕೂ ಮಾಹಿತಿ ಹಕ್ಕಿಗೂ ಯಾವುದೇ ರೀತಿಯ ನಂಟು ಇದೆಯೇ?” ಎಂದು ಕೇಳಿತು.

ಅಲ್ಲದೆ “ದಯವಿಟ್ಟು ಎಂ ಎ ಅಧ್ಯಯನ ಮಾಡಿ. ನಂತರ ಎನ್‌ ಇಟಿ ಜೆಆರ್‌ ಎಫ್‌ ತೇರ್ಗಡೆಯಾಗಿ. ಸಂಶೋಧನೆ ಮಾಡಲು ಯಾವುದೇ ವಿಶ್ವವಿದ್ಯಾಲಯ ನಿರಾಕರಿಸಿದರೆ ನಮ್ಮ ಬಳಿ ಬನ್ನಿ” ಎಂದು ಪೀಠ ಅರ್ಜಿದಾರರಿಗೆ ಕುಟುಕಿತು.

ಬಳಿಕ ಅರ್ಜಿ ವಿಚಾರಣೆಗೆ ಸೂಕ್ತವಾಗಿಲ್ಲ ಎಂದು ಹೇಳಿ ಅದನ್ನು ವಜಾಗೊಳಿಸಿದರು.



Join Whatsapp