ನಾವು ಮುಸ್ಲಿಮ್ ವಿರೋಧಿಗಳಲ್ಲ. ಮುಸ್ಲಿಮರಲ್ಲೂ ಒಳ್ಳೆಯವರಿದ್ದಾರೆ ಎಂದ ಸಿ.ಟಿ.ರವಿ

Prasthutha|

ಚಿಕ್ಕಮಗಳೂರು: ನಾವು ಮುಸ್ಲಿಮ್ ವಿರೋಧಿಗಳಲ್ಲ. ಮುಸ್ಲಿಮರಲ್ಲೂ ಒಳ್ಳೆಯವರಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಮತ್ತೆ ಮುಸ್ಲಿಮ್ ವಿಷಯ ಪ್ರಸ್ತಾಪಿಸಿದ್ದಾರೆ.
ಬ್ಯಾಡಗಿ ಪಟ್ಟಣದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಿ.ಟಿ ರವಿ ಅವರು, ಮುಸ್ಲಿಮರಿಗೂ ಆಯ್ಕೆಯಿದೆ, ಶಿಶುನಾಳ ಶರೀಫ್ ಅವರೊಂದಿಗೆ ಗುರುತಿಸಿಕೊಂಡರೆ ನೀವೂ ನಮ್ಮವರೆ ಆಗಿರುತ್ತೀರಿ, ಬಿನ್ ಲಾಡೆನ್ ಅವರೊಂದಿಗೆ ಗುರುತಿಸಿಕೊಂಡರೆ ಸರ್ಜಿಕಲ್ ಸ್ಟ್ರೈಕ್ ಮಾಡಲು ನಾವು ತಯಾರಾಗಿದ್ದೇವೆ. ಬೆಂಕಿ ಹಾಕಲು ಬಂದರೆ ಯೋಗಿ ಆದಿತ್ಯನಾಥ್ ಥರ ಕರ್ನಾಟಕದಲ್ಲಿ ಬುಲ್ಡೋಜರ್ ಚಾಲೂ ಮಾಡುತ್ತೇವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಾವು ಮುಸ್ಲಿಂ ವಿರೋಧಿಗಳಲ್ಲ, ಮುಸ್ಲಿಮರಲ್ಲೂ ಒಳ್ಳೆಯವರಿದ್ದಾರೆ. ಬಾಂಬ್ ಇಡುವ ಜನ ನಮಗೆ ಬೇಡ. ಸಂತ ಶಿಶುನಾಳ ಶರೀಫರ ರೀತಿಯ ಜನ ಬಂದರೆ ಬಾರಪ್ಪ ಎಂದು ಪೂಜೆ ಮಾಡುತ್ತೇವೆ. ಇಬ್ರಾಹಿಂ ಸೂತಾರ, ಶಿಶುನಾಳ ಶರೀಫ, ಅಬ್ದುಲ್ ಕಲಾಂ, ಅಬ್ದುಲ್ ಹಮೀದ್ ಆಗಿ ಬಂದರೆ ತಲೆ ಮೇಲೆ ಇಟ್ಟುಕೊಂಡು ಮೆರೆಸುತ್ತೇವೆ ಎಂದು ಸಿ.ಟಿ.ರವಿ ಹೇಳಿದರು.
ಶಿವಮೊಗ್ಗ ಡಿ.ಸಿ. ಕಚೇರಿ ಮೇಲೆ ಆಝಾನ್ ಕೂಗಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿ.ಟಿ ರವಿ, ಇದರಿಂದ ಅವರ ಮಾನಸಿಕತೆ ಏನಿದೆ ಅಂತ ವ್ಯಕ್ತಗೊಳ್ಳುತ್ತದೆ. ಇದು ಜಿನ್ನಾ, ಬಿನ್ ಲಾಡೆನ್ ಮಾನಸಿಕತೆಗಿಂತ ಭಿನ್ನವಾಗಿಲ್ಲ. ಆ ಮಾನಸಿಕತೆಯನ್ನು ಹೇಗೆ ಸರ್ಜಿಕಲ್ ಸ್ಟ್ರೈಕ್ ಮಾಡಬೇಕು ಎಂಬುದು ನಮಗೆ ಗೊತ್ತಿದೆ ಎಂದು ಹೇಳಿದರು.
ಹೊಸ ಮಸೀದಿ ಕಟ್ಟಿ, ನಾವು ಖುಷಿ ಪಡುತ್ತೇವೆ. ದೇವಾಲಯ ಒಡೆದು ಮಸೀದಿ ಕಟ್ಟಿ ನಮಾಝ್ ಮಾಡಿದರೆ ಒಳ್ಳೆಯದಾಗಲು ಸಾಧ್ಯವೇ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

- Advertisement -