ಬೆಂಗಳೂರು: ಬಿಜೆಪಿ ಯಾರನ್ನೇ ಕಣಕ್ಕಿಳಿಸಿದರೂ ನಮಗೆ (ಕಾಂಗ್ರೆಸ್) ಭಯ ಇಲ್ಲ. ರಾಜಕೀಯ ಎಂದು ಬಂದಾಗ ಹೋರಾಟ ಇದ್ದಿದ್ದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ಹೈಕಮಾಂಡ್ ಸೂಚಿಸಿದರೆ ಸಚಿವರು, ಶಾಸಕರು ಯಾರೇ ಆದರೂ ಸ್ಪರ್ಧಿಸಲು ಸಿದ್ಧವಾಗಿ ಇರಬೇಕಾಗುತ್ತದೆ ಎಂದರು.
ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಯಾರೇ ಸ್ಪರ್ಧಿಸಲಿ. ನಮಗೆ ಯಾರನ್ನು ನಿಲ್ಲಿಸಿದರೂ ಭಯ ಇಲ್ಲ. ಡಾ. ಮಂಜುನಾಥ್ ಅವರ ಬಗ್ಗೆ ಗೌರವ ಇದೆ. ವೃತ್ತಿಯಲ್ಲಿ ನಮ್ಮ ಸರ್ಕಾರ ಕೂಡ ಅವರಿಗೆ ಸಹಕಾರ ನೀಡಿದೆ. ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಮಂಜುನಾಥ್ ಅವರನ್ನು ವೃತ್ತಿಯಲ್ಲಿ ಮುಂದುವರಿಸಿದ್ದರು. ಈಗಲೂ ಮತ್ತೆ ನಮ್ಮ ಸರ್ಕಾರ ಬಂದ ಮೇಲೆಯೂ ಅವರನ್ನು ಮುಂದುವರೆಸಲಾಗಿತ್ತು. ಅವರಿಗೆ ಎಲ್ಲ ಗೌರವವನ್ನೂ ಕೊಟ್ಟಿದ್ದೇವೆ. ಆದರೆ, ರಾಜಕೀಯ ಎಂದು ಬಂದಾಗ ನೋಡೋಣ ಎಂದರು.