ನವದೆಹಲಿ: “ನನ್ನ ಮಕ್ಕಳು ತಂದೆ ಎಲ್ಲಿದ್ದಾರೆ ಎಂದು ಕೇಳುತ್ತಲೇ ಇದ್ದಾರೆ. ನಾನು ಅವರಿಗೆ ಏನು ಉತ್ತರಿಸಲಿ” ಎಂದು ಯುಎಪಿಎ ಸುಳ್ಳಾರೋಪದ ಅಡಿಯಲ್ಲಿ ಬಂಧಿತರಾಗಿರುವ ಅತೀಕುರ್ ರಹ್ಮಾನ್ ಪತ್ನಿ ಸಂಜಿದಾ ರಹ್ಮಾನ್ ಅವರು ಗದ್ಗರಿತವಾಗಿ ಪತ್ರಿಕಾಗೋಷ್ಠಿಯಲ್ಲಿ ಸರ್ಕಾರವನ್ನು ಪ್ರಶ್ನಿಸಿದರು.
ಮಾತ್ರವಲ್ಲ ಮುಸ್ಲಿಮ್ ಎಂಬ ಕಾರಣಕ್ಕಾಗಿ ನಮ್ಮನ್ನು ಗುರಿಪಡಿಸಲಾಗುತ್ತಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆ. ನನ್ನ ಪತಿ ಅತೀಕುರ್ ರಹ್ಮಾನ್ ಮತ್ತು ಇತರ ನಾಲ್ವರು ಸಂತ್ರಸ್ತರು ಕಳೆದ ಒಂದು ವರ್ಷದಿಂದ ಮಾಡದ ತಪ್ಪಿಗೆ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ ಎಂದು ಸಂಜಿದಾ ಆರೋಪಿಸಿದರು.
ದೆಹಲಿ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಜಿದಾ ಅವರು ಇಬ್ಬರು ಸಂಬಂಧಿಕರೊಂದಿಗೆ ಭಾಗವಹಿಸಿದ್ದರು. ಹತ್ರಾಸ್ ಘಟನೆಯನ್ನು ವರದಿ ಮಾಡಲು ತೆರಳಿದ್ದ ಕೇರಳ ಮೂಲದ ಪತ್ರಕರ್ತ ಸಿದ್ದೀಕ್ ಕಪ್ಪನ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಮುಖಂಡರಾದ ಅತೀಕುರ್ ರಹ್ಮಾನ್, ರೌಫ್ ಶರೀಫ್, ಮಸೂದ್ ಅಹ್ಮದ್ ಮತ್ತು ಚಾಲಕ ಆಲಂ ಎಂಬವರನ್ನು ಅಕ್ಟೋಬರ್ 5, 2020 ರಂದು ಉತ್ತರಪ್ರದೇಶದ ಪೊಲೀಸರು ಬಂಧಿಸಿದ್ದರು. ಇವರ ಮೇಲೆ ಯುಎಪಿಎ ಪ್ರಕರಣ ದಾಖಲಿಸಲಾಗಿತ್ತು.
ಹೃದ್ರೋಗಿಯಾದ ತನ್ನ ಪತಿಯನ್ನು ಶೀಘ್ರ ಬಿಡುಗಡೆಗೊಳಿಸಬೇಕೆಂದು ಸಂಜಿದಾ ರಹ್ಮಾನ್ ಅವರು ಸರ್ಕಾರವನ್ನು ಒತ್ತಾಯಿಸಿದರು. ಕಳೆದ ವಾರ ಏಮ್ಸ್ ಗೆ ಸ್ಥಳಾಂತರಿಸುವ ಆದೇಶದ ಹೊರತಾಗಿಯೂ ಜೈಲು ಅಧಿಕಾರಿಗಳು ರಹ್ಮಾನ್ ಅವರನ್ನು ಇನ್ನೂ ಆಸ್ಪತ್ರೆಗೆ ಸ್ಥಳಾಂತರಿಸಲಾಗಿಲ್ಲ ಎಂದು ಆರೋಪಿಸಿದರು.