ಗದಗ: ಕಾವೇರಿ ನೀರು ತಮಿಳುನಾಡಿಗೆ ಬಿಡುವ ವಿಚಾರವಾಗಿ ಪ್ರತಿಭಟನೆ ಮಾಡುತ್ತಿರುವ ಬಿಜೆಪಿ ವಿರುದ್ಧ ಸಚಿವ ಎಂಬಿ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿಯವರು ಸೋತು ಸುಣ್ಣವಾಗಿದ್ದಾರೆ. ನೆಲ, ಜಲ, ಭಾಷೆ ವಿಚಾರದಲ್ಲಿ ರಾಜಕೀಯ ಮಾಡಬಾರದು. ಬಿಜೆಪಿಯವರಿಗೆ ವಿರೋಧ ಪಕ್ಷದ ನಾಯಕನನ್ನು ನೇಮಕ ಮಾಡಲು ಸಾಧ್ಯವಾಗಿಲ್ಲ. ವಿರೋಧ ಪಕ್ಷದ ನಾಯಕ ಇಲ್ಲದೆ ಅಧಿವೇಶನ ನಡೆದಿದೆ. ಅವರ ಪಕ್ಷದಲ್ಲಿ ಹತಾಶರಾಗಿ ಪಕ್ಷವನ್ನು ಬಿಡುವ ಹಂತದಲ್ಲಿ ಬಹಳಷ್ಟು ಜನ ಇದ್ದಾರೆ ಎಂದು ಹೇಳಿದರು.
ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು, ‘ಮಳೆಯಾಗದ ಕಾರಣ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಮಂಡ್ಯ ಜಿಲ್ಲೆ ರೈತರು ಸಂಕಷ್ಟದಲ್ಲಿದ್ದಾರೆ. ಪರಿಸ್ಥಿತಿ ಹೀಗಿದ್ದರೂ 10 ಸಾವಿರ ಕ್ಯುಸೆಕ್ ನೀರು ಬಿಡುವಂತೆ ಸಿಡಬ್ಲ್ಯುಸಿ ಆದೇಶ ಮಾಡಿದೆ. ನಮಗೆ 10 ಸಾವಿರ ಕ್ಯುಸೆಕ್ ನೀರು ಬಿಡುವುದೇ ಕಷ್ಟ. ಅಂತಹದ್ದರಲ್ಲಿ ತಮಿಳುನಾಡು ಸರ್ಕಾರ 24 ಸಾವಿರ ಕ್ಯುಸೆಕ್ ನೀರು ಬಿಡುವಂತೆ ಮನವಿ ಮಾಡಿದೆ. ಈ ಸಂಬಂಧ ನಾವು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಅಲ್ಲಿ ಸಮರ್ಥವಾಗಿ ವಾದ ಮಂಡಿಸಿ ನ್ಯಾಯಯುತ ಪರಿಹಾರ ಕಂಡುಕೊಳ್ಳುತ್ತೇವೆ’ ಎಂದು ತಿಳಿಸಿದರು.
‘ಇಂಡಿಯಾ’ ಒಕ್ಕೂಟದ ಹಿತಕಾಪಾಡಲು ತಮಿಳುನಾಡಿಗೆ ನೀರು ಹರಿಸಲಾಗಿದೆ ಎಂಬ ಬಿಜೆಪಿ ಮುಖಂಡ ಸಿ.ಟಿ.ರವಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ವಿರೋಧ ಪಕ್ಷಗಳು ಅಧಿಕಾರದಲ್ಲಿ ಇದ್ದಾಗಲೂ ತಮಿಳುನಾಡಿಗೆ ನೀರು ಹರಿಸಿವೆ. ನಾವು ಡಿಎಂಕೆ ಸರ್ಕಾರವನ್ನು ಖುಷಿಪಡಿಸಲು ನೀರು ಹರಿಸಿಲ್ಲ. ಕೇಂದ್ರದ ಸಿಡಬ್ಲ್ಯುಸಿ ಆದೇಶದ ಮೇರೆಗೆ ನೀರು ಬಿಡಲಾಗಿದೆ. ಹಾಗಂತ, ಕೇಂದ್ರ ಸರ್ಕಾರ ಆದೇಶಿಸಿದೆ ಎಂದು ಹೇಳಬಹುದೇ’ ಎಂದು ಪ್ರಶ್ನಿಸಿದರು.