ಪ್ರತಿಭಟನೆಯ ನೆಪದಲ್ಲಿ ಚರ್ಚ್ ನಲ್ಲಿ ಭಜನೆ ಹಾಡಿದ ಸಂಘಪರಿವಾರದ ಕಾರ್ಯಕರ್ತರು

Prasthutha|

ಬೆಂಗಳೂರು: ಮತಾಂತರದ ವಿರುದ್ಧ ಪ್ರತಿಭಟನೆ ನೆಪದಲ್ಲಿ ಹುಬ್ಬಳ್ಳಿಯಲ್ಲಿರುವ ಚರ್ಚ್ ಗೆ ಅಕ್ರಮ ಪ್ರವೇಶಗೈದ ಬಜರಂಗದಳ ಮತ್ತು ವಿ.ಎಚ್.ಪಿ ಕಾರ್ಯಕರ್ತರು ಚರ್ಚ್ ಒಳಗೆ ಭಜನೆ ಮತ್ತು ಕೀರ್ತನೆ ಹಾಡಿದ ಘಟನೆ ವರದಿಯಾಗಿದೆ.

- Advertisement -

ಹುಬ್ಬಳ್ಳಿಯ ಬೈರಿದೇವರಕೊಪ್ಪ ಚರ್ಚ್ ಗೆ ಪ್ರವೇಶಗೈದ ಸಂಘಪರಿವಾರದ ನೂರಾರು ಸದಸ್ಯರು ಭಜನೆ ಮತ್ತು ಕೀರ್ತನೆ ಹಾಡುತ್ತಿರುವ ದೃಶ್ಯ ವೈರಲ್ ಆಗುತ್ತಿದೆ.

ಮಾತ್ರವಲ್ಲ ಸ್ಥಳೀಯ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಅವರು ಚರ್ಚ್ ನ ಪಾದ್ರಿ ಸೋಮು ಅವರಧಿ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಹೆದ್ದಾರಿಯನ್ನು ತಡೆದು ಪ್ರತಿಭಟಿಸಿದರು.

- Advertisement -

ಘಟನೆಗೆ ಸಂಬಂಧಿಸಿದಂತೆ ಚರ್ಚ್ ಮತ್ತು ಬಲಪಂಥೀಯ ಕಾರ್ಯಕರ್ತರು ಒಳಗೊಂಡಂತೆ ಉಭಯ ಕಡೆಯವರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಮಾತ್ರವಲ್ಲ ಪಾದ್ರಿ ಸೋಮು ಮತ್ತು ಆತನ ಸಹಚರರು ಸಣ್ಣಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಚರ್ಚ್ ನ ಅಧಿಕಾರಿಗಳ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಠಾಣೆಗೆ ದೂರು ದಾಖಲಿಸಿದ್ದಾರೆ ಎಂದು ಹುಬ್ಬಳ್ಳಿ – ಧಾರವಾಡದ ಪೊಲೀಸ್ ಆಯುಕ್ತರಾದ ಲಾಬು ರಾಮ್ ತಿಳಿಸಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ಮುಂದುವರಿದಿದ್ದು, ಸೋಮು ಅವರಧಿ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದರು.

ಚರ್ಚ್ ಪಾದ್ರಿ ಸೋಮು ಅವರಧಿ ನೇತೃತ್ವದಲ್ಲಿ ಮತಾಂತರ ನಡೆಯುತ್ತಿದೆ ಎಂದು ಬಜರಂಗದಳ ರಾಜ್ಯ ಸಂಚಾಲಕ ರಘು ಸಕಲೇಶಪುರ ಆರೋಪಿಸಿದ್ದಾರೆ. ಮಾತ್ರವಲ್ಲ ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಗೆ ದೂರು ದಾಖಲಿಸಿ ಆರೋಪಿ ಸೋಮು ಮತ್ತು ಇತರರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಈ ಮಧ್ಯೆ ಚರ್ಚ್ ಪದಾಧಿಕಾರಿಗಳು ಬಜರಂಗದಳ ಆರೋಪವನ್ನು ನಿರಾಕರಿಸಿದ್ದು ಇಲ್ಲಿ ಯಾವುದೇ ರೀತಿಯ ಮತಾಂತರ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.



Join Whatsapp