ಹೋಬರ್ಟ್: ಪ್ರತಿಷ್ಠಿತ ಆ್ಯಷಸ್ ಟೆಸ್ಟ್ ಸರಣಿಯನ್ನು ಗೆದ್ದ ಬಳಿಕ ಸಂಭ್ರಮಾಚರಣೆಯ ವೇಳೆ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಇಂಗ್ಲೆಂಡ್ ವಿರುದ್ಧದ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು ಗೆದ್ದು ಟ್ರೋಫಿ ಸ್ವೀಕರಿಸಿದ ಬಳಿಕ ಆಸೀಸ್ ತಂಡದ ಸದಸ್ಯರೆಲ್ಲರೂ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಆದರೆ ತಂಡದ ಪ್ರಮುಖ ಬ್ಯಾಟರ್ ಉಸ್ಮಾನ್ ಖ್ವಾಜಾ ಸಂಭ್ರಮಾಚರಣೆಯಿಂದ ದೂರ ಉಳಿದಿದ್ದರು. ಇದಕ್ಕೆ ಕಾರಣವಾಗಿದ್ದು ಆಸೀಸ್ ಆಟಗಾರರು ಶಾಂಪೇನ್ ಚಿಮ್ಮಿಸಿ ಸಂಭ್ರಮದಲ್ಲಿದ್ದರು. ಈ ವೇಳೆ ಉಸ್ಮಾನ್ ಖ್ವಾಜಾ ದೂರ ನಿಂತಿರುವುದನ್ನು ಗಮನಿಸಿದ ಕ್ಯಾಪ್ಟನ್ ಕಮ್ಮಿನ್ಸ್ ಶಾಂಪೇನ್ ಚಿಮ್ಮಿಸದಂತೆ ಸಹ ಆಟಗಾರರಲ್ಲಿ ಸೂಚಿಸಿದರು. ಬಳಿಕ ವೇದಿಕೆಗೆ ಉಸ್ಮಾನ್ ಖ್ವಾಜಾ ರನ್ನು ಆಹ್ವಾನಿಸಿ ಒಟ್ಟಾಗಿ ಪ್ರಶಸ್ತಿಯೊಂದಿಗೆ ಸಂಭ್ರಮಿಸಿದರು.
ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು, ಕಮ್ಮಿನ್ಸ್ ನಡೆಗೆ ಕ್ರಿಕೆಟ್ ಅಭಿಮಾನಿಗಳು ವ್ಯಾಪಕ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.
4-0 ಅಂತರದಿಂದ ಸರಣಿ ಗೆದ್ದ ಆಸ್ಟ್ರೇಲಿಯಾ !
ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಆ್ಯಷಸ್ ಟೆಸ್ಟ್ ಸರಣಿಯನ್ನು ಅತಿಥೇಯ ಆಸ್ಟ್ರೇಲಿಯಾ 4-0 ಅಂತರದಲ್ಲಿ ಗೆಲ್ಲುವ ಮೂಲಕ ದಾಖಲೆ ನಿರ್ಮಿಸಿದೆ.
ಭಾನುವಾರ ಮುಕ್ತಾಯಗೊಂಡ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಂಗ್ಲ ಪಡೆ 146 ರನ್’ಗಳಿಂದ ಶರಣಾಗಿದೆ. ಗೆಲುವಿಗೆ 271 ರನ್ ಗಳ ಸುಲಭ ಸವಾಲು ಪಡೆದುಕೊಂಡಿದ್ದ ಇಂಗ್ಲೆಂಡ್ ತಂಡ ಮೊದಲ ವಿಕೆಟ್ ಗೆ ಅದ್ಭುತ 68 ರನ್ ಜೊತೆಯಾಟವಾಡುವ ಮೂಲಕ ಗೆಲುವಿನ ಭರವಸೆ ಮೂಡಿಸಿತ್ತು. ಆದರೆ, ಆಸೀಸ್ ಮಾರಕ ಬೌಲಿಂಗ್ ದಾಳಿಗೆ 137 ಎಸೆತಗಳ ಅಂತರದಲ್ಲಿ 56 ರನ್ ಗಳಿಸುವ ವೇಳೆಗೆ ಎಲ್ಲಾ 10 ವಿಕೆಟ್ ಕಳೆದುಕೊಳ್ಳುವ ಮೂಲಕ ಸರಣಿಯಲ್ಲಿ ಇಂಗ್ಲೆಂಡ್ ನಾಲ್ಕನೇ ಸೋಲು ಕಂಡಿತು.