ಯೂಟ್ಯೂಬ್ ವೀಡಿಯೋ ನೋಡಿ ಸ್ವತಃ ಹೆರಿಗೆ ಮಾಡಿಕೊಂಡ ಅಪ್ರಾಪ್ತೆ

Prasthutha|

ತಿರುವನಂತಪುರ: ಪ್ರಿಯಕರನಿಂದ ಗರ್ಭವತಿಯಾದ ಹದಿನೇಳು ವರ್ಷ ಪ್ರಾಯದ ಅಪ್ರಾಪ್ತೆಯೊಬ್ಬಳು ಯೂಟ್ಯೂಬ್ ವೀಡಿಯೋಗಳನ್ನು ನೋಡಿ ಮನೆಯಲ್ಲಿ ತಾನೇ ಹೆರಿಗೆ ಮಾಡಿಕೊಂಡು ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ.

- Advertisement -


ಕಳೆದ ಅ. 20ರಂದು ಬಾಲಕಿಯು ಮಗುವಿಗೆ ಜನ್ಮ ನೀಡಿದ್ದು, ಯೂಟ್ಯೂಬ್ ವೀಡಿಯೋಗಳನ್ನು ಮಾರ್ಗದರ್ಶಿಯಾಗಿ ಬಳಸಿಕೊಂಡು ಹೊಕ್ಕಳಬಳ್ಳಿಯನ್ನು ಕತ್ತರಿಸಿಕೊಂಡಿದ್ದಾಳೆ.
ಸಂಪೂರ್ಣ ಹೆರಿಗೆ ಪ್ರಕ್ರಿಯೆಯನ್ನು ಹುಡುಗಿ ಯಾವುದೇ ಹೊರಗಿನವರ ಸಹಾಯ ಪಡೆಯದೇ ತಾನೇ ಮಾಡಿಕೊಂಡಿದ್ದಾಳೆ ಎಂಬ ವಿಚಾರ ತನಿಖೆ ವೇಳೆ ಪೊಲೀಸರಿಗೆ ತಿಳಿದುಬಂದಿದೆ.
ಮಂಜೇರಿಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ತಾಯಿ ಮತ್ತು ಮಗುವನ್ನು ದಾಖಲಿಸಲಾಗಿದ್ದು, ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಅಲ್ಲದೇ ಆಕೆಯನ್ನು ಗರ್ಭಿಣಿ ಮಾಡಿದ 21 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಪೋಕ್ಸೊ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 376(ಅತ್ಯಾಚಾರ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕಳೆದ ಅ. 22 ರಂದು ಮಗು ಅಳುವ ಶಬ್ಧ ಕೇಳಿ ಪೋಷಕರಿಗೆ ಘಟನೆ ಕುರಿತಂತೆ ತಿಳಿದುಬಂದಿದೆ. ಮಗುವಿಗೆ ಜನ್ಮ ನೀಡಿದ ಹುಡುಗಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆಯನ್ನು ಆಸ್ಪತ್ರೆಗೆ ಕರೆತರಲಾಯಿತು. ಬಳಿಕ ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ.

- Advertisement -


ಬಾಲಕಿಯು ಪಿಯುಸಿ ವಿದ್ಯಾರ್ಥಿನಿಯಾಗಿದ್ದು, ಈಕೆಯ ತಾಯಿಗೆ ದೃಷ್ಟಿದೋಷವಿದ್ದು, ಆಕೆಯ ತಂದೆಯಿಂದ ಕೂಡ ತಾನು ಗರ್ಭಿಣಿ ಎಂಬ ವಿಷಯವನ್ನು ಮರೆಮಾಚುವಲ್ಲಿ ಯಶಸ್ವಿಯಾಗಿದ್ದಳು. ಅಲ್ಲದೇ ಅಪ್ರಾಪ್ತೆ ಗರ್ಭಾವಸ್ಥೆಯಲ್ಲಿ ಎರಡು ಆಸ್ಪತ್ರೆಗಳಿಂದ ವೈದ್ಯಕೀಯ ನೆರವು ಪಡೆದಿದ್ದಳು. ಹೀಗಾಗಿ ಈ ಆಸ್ಪತ್ರೆಗಳಿಂದ ಯಾವುದಾದರೂ ಲೋಪಗಳಿದ್ದರೆ ಅದನ್ನು ಸಿಡಬ್ಲೂಸಿ ವಿಚಾರಿಸುತ್ತದೆ ಎಂದು ಮಕ್ಕಳ ಕಲ್ಯಾಣ ಸಮಿತಿ ತಿಳಿಸಿದೆ.


ಬಾಲಕಿ ಹಾಗೂ ಯುವಕ ಇಬ್ಬರು ಹಲವು ದಿನಗಳಿಂದ ಪ್ರೀತಿಸುತ್ತಿದ್ದರು. ಇಬ್ಬರ ಕುಟುಂಬಸ್ಥರು ಕಾನೂನುಬದ್ಧವಾಗಿ ಬಾಲಕಿಗೆ 18 ವರ್ಷ ತುಂಬಿದ ಬಳಿಕ ಇಬ್ಬರಿಗೂ ಮದುವೆ ಮಾಡಲು ಚಿಂತನೆ ನಡೆಸಿದ್ದರು.
ಅಪ್ರಾಪ್ತೆ ಹಾಗೂ ಮಗುವಿಗೆ ಯುವಕನ ಕುಟುಂಬಸ್ಥರು ಚಿಕಿತ್ಸೆ ಕೊಡಿಸುತ್ತಿದ್ದಾರೆ. ಬಾಲಕಿಗೆ ಇನ್ನೂ 17 ವರ್ಷವಾಗಿರುವುದರಿಂದ ಪೊಲೀಸರು ಇದನ್ನೂ ಅತ್ಯಾಚಾರ ಪ್ರಕರಣ ಎಂದು ಪರಿಗಣಿಸಿದ್ದಾರೆ.

Join Whatsapp