ವಾಷಿಂಗ್ಟನ್ : ಅಮೆರಿಕ ಸಂಸತ್ ಭವನದ ಮೇಲೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ದಾಳಿ ನಡೆಸಿರುವ ಬಗ್ಗೆ ಜಗತ್ತಿನ ಬಹುತೇಕ ರಾಷ್ಟ್ರಗಳು ಕಳವಳ ವ್ಯಕ್ತಪಡಿಸಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸುಲಭ ಅಧಿಕಾರ ಹಸ್ತಾಂತರಕ್ಕೆ ಅಡ್ಡಿಯಾಗಿರುವ ಅಧ್ಯಕ್ಷ ಟ್ರಂಪ್ ಬೆಂಬಲಿಗರ ನಡೆಯ ಬಗ್ಗೆ ಎಲ್ಲೆಡೆ ಆಕ್ರೋಶವೂ ವ್ಯಕ್ತವಾಗಿದೆ.
ಘಟನೆಯ ಕುರಿತು ಜಾಗತಿಕ ನಾಯಕರು ಬೇಸರ ವ್ಯಕ್ತಪಡಿಸಿದ್ದು, ಕೆಲವರು ಖಂಡಿಸಿದ್ದಾರೆ. ಇಲ್ಲಿ ಕೆಲವು ಪ್ರಮುಖ ನಾಯಕರ ಟ್ವೀಟ್ ಆಧರಿಸಿದ ಹೇಳಿಕೆಗಳನ್ನು ದಾಖಲಿಸಲಾಗಿದೆ.
ನಮ್ಮ ನೆರೆಯ ಮತ್ತು ಆಪ್ತ ಮಿತ್ರರಾಷ್ಟ್ರವಾದ ಅಮೆರಿಕದಲ್ಲಿ ಪ್ರಜಾಪ್ರಭುತ್ವದ ಮೇಲೆ ನಡೆದ ದಾಳಿಯಿಂದ ಕೆನಡಿಗರು ತುಂಬಾ ಕಳವಳ ಮತ್ತು ಬೇಸರಗೊಂಡಿದ್ದಾರೆ. ಹಿಂಸೆಯ ಮೂಲಕ ಜನರ ಇಚ್ಛೆಯನ್ನು ಬದಲಿಸಲು ಸಾಧ್ಯವಿಲ್ಲ. ಅಮೆರಿಕದಲ್ಲಿ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಬೇಕು ಮತ್ತು ಎತ್ತಿ ಹಿಡಿಯಲಾಗುತ್ತದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡ್ಯು ಭರವಸೆ ವ್ಯಕ್ತಪಡಿಸಿದ್ದಾರೆ.
ಎಲ್ಲರಂತೆ, ನಾನೂ ಅಮೆರಿಕದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನೋಡುತ್ತಿದ್ದೇನೆ. ಅಮೆರಿಕದಲ್ಲಿರುವ ಸ್ನೇಹಿತರ ಭಾವನೆಗಳನ್ನು ನಾನು ಹಂಚಿಕೊಳ್ಳುತ್ತಿದ್ದೇನೆ – ಏನು ನಡೆಯುತ್ತಿದೆಯೋ ಅದು ತಪ್ಪು ಎಂದು ನ್ಯೂಝಿಲ್ಯಾಂಡ್ ಪ್ರಧಾನಿ ಜೆಸಿಂಡಾ ಆರ್ಡೆರ್ನ್ ಟ್ವೀಟ್ ಮಾಡಿದ್ದಾರೆ.
ಅಮೆರಿಕ ಸಂಸತ್ತಿನಲ್ಲಿ ನಾಚಿಕೆಗೇಡು ದೃಶ್ಯಗಳು ಕಂಡುಬಂದಿವೆ. ಜಗತ್ತಿನಾದ್ಯಂತ ಅಮೆರಿಕ ಪ್ರಜಾಪ್ರಭುತ್ವದ ಪರ ನಿಂತಿದೆ ಮತ್ತು ಈಗ ಅದು ಶಾಂತಿಯುತ ಮತ್ತು ಕ್ರಮಬದ್ಧವಾದ ಅಧಿಕಾರ ಹಸ್ತಾಂತರ ಮಾಡಿಕೊಳ್ಳಬೇಕು ಎಂದು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.
ಫ್ರಾನ್ಸ್ ಅಧ್ಯಕ್ಷ ಇಮಾನ್ಯುಯೆಲ್ ಮಾಕ್ರೊನ್, ನಾವು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೊಂದಿದ್ದೇವೆ ಎಂಬ ಸಂದೇಶದೊಂದಿಗೆ, ವೀಡಿಯೊವೊಂದನ್ನು ಟ್ವೀಟ್ ಮಾಡಿ, ಅಮೆರಿಕದ ಬೆಳವಣಿಗೆಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ವಾಷಿಂಗ್ಟನ್ ಡಿಸಿಯಲ್ಲಿ ಗಲಭೆ ಮತ್ತು ಹಿಂಸೆಯ ಸುದ್ದಿ ನೋಡಿ ಬೇಸರವಾಗಿದೆ. ಕ್ರಮಬದ್ಧವಾದ ಮತ್ತು ಶಾಂತಿಯುತ ಅಧಿಕಾರ ಹಸ್ತಾಂತರ ಮುಂದುವರಿಯಬೇಕು. ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳು ಕಾನೂನು ಬಾಹಿರ ಪ್ರತಿಭಟನೆಗಳ ಮೂಲಕ ಬೇರೆ ಕಡೆ ತಿರುಗಬಾರದು ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅಮೆರಿಕ ಸಂಸತ್ತಿನ ದೃಶ್ಯಗಳು ತುಂಬಾ ಬೇಸರವನ್ನುಂಟು ಮಾಡಿದೆ. ಈ ಹಿಂಸಾತ್ಮಕ ನಡವಳಿಕೆಗಳನ್ನು ನಾವು ಖಂಡಿಸುತ್ತೇವೆ. ಅಧಿಕಾರ ಶಾಂತಿಯುತವಾಗಿ ಹಸ್ತಾಂತರವಾಗಬೇಕು ಎಂದು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮೊರ್ರಿಸನ್ ಹೇಳಿದ್ದಾರೆ.