ವಿಜಯಪುರ: ವಕ್ಫ್ ಆಸ್ತಿ ದೇವರ ಆಸ್ತಿ, ಅದರ ಕಬಳಿಕೆ ಅಥವಾ ಹಗರಣ ಆಗಬಾರದು, ರಕ್ಷಿಸುವ ಕೆಲಸವಾಗಬೇಕು ಎಂದು ಸಚಿವ ಝಮೀರ್ ಅಹ್ಮದ್ ಖಾನ್ ಕರೆ ನೀಡಿದರು.
ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ವಕ್ಫ್ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಸಹಯೋಗದಲ್ಲಿ ಜಿಲ್ಲೆಯ ಮುತ್ತವಲ್ಲಿಗಳ ಸಮ್ಮೇಳನ ಹಾಗೂ ವಕ್ಫ್ ಅದಾಲತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಸದ್ಯ ರಾಜ್ಯದಲ್ಲಿರುವ ಒಟ್ಟು 1.12 ಲಕ್ಷ ಎಕರೆ ವಕ್ಫ್ ಆಸ್ತಿಯಲ್ಲಿ 85,000 ಎಕರೆ ಅತಿಕ್ರಮಣವಾಗಿ ಕೇವಲ 23,000 ಎಕರೆ ಮಾತ್ರ ಉಳಿದಿದೆ. ಆದ್ದರಿಂದ ಪ್ರತಿಯೊಬ್ಬರೂ ವಕ್ಫ್ ಆಸ್ತಿ ಸಂರಕ್ಷಣೆಗೆ ಮುಂದಾಗಬೇಕು ಎಂದರು.
ವಕ್ಫ್ ಆಸ್ತಿ ಸಂರಕ್ಷಣೆ ಹಾಗೂ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಈವರೆಗೆ ರಾಜ್ಯದಾದ್ಯಂತ 10 ಜಿಲ್ಲೆಗಳಲ್ಲಿ ವಕ್ಫ್ ಅದಾಲತ್ ಹಮ್ಮಿಕೊಳ್ಳಲಾಗಿದ್ದು, ಅದರಂತೆ ಸೋಮವಾರ ವಿಜಯಪುರದಲ್ಲಿ 11ನೇ ಅದಾಲತ್ ನಡೆಯಿತು. ಕಳೆದ 10-15 ವರ್ಷಗಳಿಂದ ಬಾಕಿ ಉಳಿದ ವಕ್ಫ್ ಖಾತೆ ಬದಲಾವಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ನಾನು ಸಚಿವನಾದ ಮೇಲೆ 727 ಖಾತೆ ಬದಲಾವಣೆಗೆ ಕ್ರಮ ವಹಿಸಲಾಗಿದೆ ಎಂದು ಅವರು ಹೇಳಿದರು.
ಅದಾಲತ್ ನಲ್ಲಿ ವಕ್ಫ್ ಆಸ್ತಿಗಳ ಅತಿಕ್ರಮಣದ 17 ಅರ್ಜಿಗಳು, ಖಬರಸ್ಥಾನ (ಸ್ಮಶಾನ)ಕ್ಕೆ ಸಂಬಂಧಿಸಿದ್ದು, ಖಾತೆ ಬದಲಾವಣೆಯ 81 ಅರ್ಜಿಗಳು, ಸರ್ವೇ ಕಾರ್ಯಕ್ಕಾಗಿ 25 ಅರ್ಜಿಗಳು ಸೇರಿದಂತೆ ಒಟ್ಟು 330 ಅರ್ಜಿಗಳು ಸಲ್ಲಿಕೆಯಾಗಿವೆ. ಇಲ್ಲಿ ಸಲ್ಲಿಕೆಯಾದ ಅರ್ಜಿಗಳು ಯಾವುದೇ ಕಾರಣಕ್ಕೂ ವ್ಯರ್ಥವಾಗುವುದಿಲ್ಲ, ಪ್ರತಿಯೊಂದು ಅರ್ಜಿಗಳಿಗೂ ಸ್ಪಂದಿಸಲಾಗುವುದು. ಸ್ವೀಕರಿಸಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ಶೀಘ್ರವೇ ಸಭೆ ನಡೆಸಿ, ಅಧಿಕಾರಿಗಳಿಗೆ ಒಂದು ತಿಂಗಳ ಕಾಲಾವಕಾಶ ಒದಗಿಸಿ ನಿಗದಿತ ಅವಧಿಯಲ್ಲಿಯೇ ಈ ಅರ್ಜಿಗಳ ಪರಿಹಾರಕ್ಕೆ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.