ಹುಬ್ಬಳ್ಳಿ: ಆಡಳಿತ ವ್ಯವಸ್ಥೆಯ ಕೈವಾಡ ಇಲ್ಲದೆ ಈ ರೀತಿ ಎಲ್ಲ ಆಗಲು ಸಾಧ್ಯವಿಲ್ಲ, ರಾಜ್ಯ ಸರ್ಕಾರದ ಸೂಚನೆಯ ಮೇರೆಗೇ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ ಎಂಬುದಾಗಿ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ಆರೋಪಿಸಿದರು.
ವಕ್ಫ್ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷರಾಗಿರುವ ಅವರು ಹುಬ್ಬಳ್ಳಿಗೆ ಭೇಟಿ ನೀಡಿ ರೈತರ ಅಹವಾಲು ಆಲಿಸಿದರು.
ಬಳಿಕ ಮಾತನಾಡಿದ ಅವರು, ರೈತರ ಜಮೀನು, ದೇಗುಲ, ಪಾರಂಪರಿಕ ತಾಣಗಳ ದಾಖಲೆಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ. 10-15 ರೈತರ ನಿಯೋಗ ಮನವಿ ಸಲ್ಲಿಸುವ ನಿರೀಕ್ಷೆ ಇತ್ತು. ಆದರೆ, 70ಕ್ಕೂ ಹೆಚ್ಚು ಅಹವಾಲು ಬಂದಿದೆ ಎಂದರು.
ಕರ್ನಾಟಕದ ರೈತರು, ಜನಸಾಮಾನ್ಯರ ಆಸ್ತಿಗಳನ್ನು ವಕ್ಫ್ ಬೋರ್ಡ್ ಕಬಳಿಕೆ ಮಾಡಿದೆ ಎಂದು ತೇಜಸ್ವಿ ಸೂರ್ಯ ಪತ್ರ ಬರೆದಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಸುಮಾರು 50 ರಿಂದ 60 ವರ್ಷಗಳಿಂದ ಉಳಿಮೆ ಮಾಡಿದ ಜಮೀನು, ದೇವಸ್ಥಾನಗಳನ್ನು ಕಬಳಿಸಲಾಗಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆ ಹುಬ್ಬಳ್ಳಿ, ವಿಜಯಪುರ, ಬೀದರ್ ರೈತರ ಹಾಗೂ ಜನರ ಅಹವಾಲು ಸ್ವೀಕರಿಸುತ್ತೇನೆ. ಸದ್ಯ ಹುಬ್ಬಳ್ಳಿಯಲ್ಲಿ ಅದ್ವೈತ್ ಪರಿಷತ್ ಉತ್ತರ ಕರ್ನಾಟಕ ಹಾಗೂ ರತ್ನ ಭಾರತ ರೈತ ಸಮಾಜದವರು ಮನವಿ ಸಲ್ಲಿಸಿದ್ದಾರೆ. ಇದನ್ನು ಸಹ ಪರಿಗಣಿಸಲಾಗುವುದು ಎಂದರು.