ವಕ್ಫ್ ಭೂಮಿ ಅನ್ನೋದು ಸೋಕಾಲ್ಡ್ ಮುಸ್ಲಿಂ ನಾಯಕರ ಪಾಲಿಗೆ ಲೂಟಿ ಮಾಡುವ ಖಜಾನೆಯಂತಿದೆ: ಎ. ಆಲಂ ಪಾಶ

Prasthutha|

ಬೆಂಗಳೂರು: ಮುಸ್ಲಿಮ್ ಸಮುದಾಯದ ಹಿರಿಯರು ತಮ್ಮ ಸಮದಾಯದ ಏಳಿಗೆಗಾಗಿ ಸುಮಾರು 54ಸಾವಿರ ಎಕ್ರೆಗೂ ಅಧಿಕ ಭೂಮಿಯನ್ನು ವಕ್ಫ್ ಬೋರ್ಡ್’ಗೆ ನೀಡಿದ್ದಾರೆ. ಅದ್ರಲ್ಲಿ ಈಗಾಗಲೇ 27ಸಾವಿರ ಎಕರೆ ಪ್ರಮುಖ ಜಾಗಗಳಲ್ಲಿದ್ದ ಜಮೀನನ್ನು ದುರುಪಯೋಗ ಪಡಿಸಲಾಗಿದೆ. ಎಂದರೆ ಅಂತಹ ಜಮೀನನ್ನು ಬಿಲ್ಡರ್’ಗಳಿಗೆ, ಲ್ಯಾಂಡ್ ಮಾಫಿಯಾಗಳಿಗೆ ಮಾರಾಟ ಮಾಡಲಾಗಿದೆ. ಹೀಗೆ ಮಾರಾಟವಾಗಿ ಹೋದ ಜಾಗದ ಬೆಲೆ 10 ಲಕ್ಷ ಕೋಟಿ ರೂಪಾಯಿಗೂ ಅಧಿಕ ಆಗುತ್ತವೆ. ಇದೆಲ್ಲವನ್ನೂ ಮುಸ್ಲಿಂ ಸಮುದಾಯದ ನಾಯಕರು ಎನಿಸಿಕೊಂಡವರೇ ಮುಂಚೂಣಿಯಲ್ಲಿ ನಿಂತು ಆಯಾಯ ಕಾಲಕ್ಕೆ ತಕ್ಕಂತೆ ಮಾರಾಟ ಮಾಡಿ ನುಂಗಿ ನೀರು ಕುಡಿದಿದ್ದಾರೆ. ಆದರೆ, ಯಾವೊಬ್ಬ ಮುಸ್ಲಿಂ ಸಮುದಾಯದ ಜನಪ್ರತಿನಿಧಿಯೂ ಈ ವಿಚಾರವಾಗಿ ಅದರ ವಿರುದ್ಧವಾಗಿ ಧ್ವನಿ ಎತ್ತುವುದಾಗಲೀ, ನ್ಯಾಯಾಲಯಕ್ಕೆ ದೂರು ನೀಡುವುದಾಗಲೀ ಮಾಡಲಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಎ. ಆಲಂ ಪಾಶ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  

- Advertisement -

ಈಗಾಗಲೇ ಮಹಾನಗರದಲ್ಲಿ ವಾಸಿಸುತ್ತಿರುವ ಮುಸ್ಲಿಮರು ಇಂತಹ ದುರ್ಬಳಕೆಯಿಂದಾಗಿ ಇಂದು ದಫನ ಭೂಮಿಗಾಗಿ ಹತ್ತಾರು ಕಿಲೋ ಮೀಟರ್ ದೂರ ಸಾಗಬೇಕಾದ ಅನಿವಾರ್ಯತೆ ಒದಗಿ ಬಂದಿದೆ. ಇದುವರೆಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಕೂಡಾ ಮುಸ್ಲಿಮರ ಭೂಮಿಯನ್ನು ತಮಗೆ ಬೇಕಾದಂತೆ ತಿಂದು ತೇಗಿದ್ದಾರೆ. ಆದ್ದರಿಂದ ವಕ್ಫ್ ಆಸ್ತಿ ಬಗ್ಗೆ ಯಾರೊಬ್ಬರೂ ಅದರ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಮಾತನಾಡಿಲ್ಲ. ಆ ಪಕ್ಷಗಳಲ್ಲಿರುವ ಮುಸ್ಲಿಂ ಜನಪ್ರತಿನಿಧಿಗಳೇ ಇದುವರೆಗೂ ಮಾತನಾಡಿದ ಉದಾಹರಣೆಗಳಿಲ್ಲ. ಆಡಳಿತ ನಡೆಸಿದ ಮೂರು ಪಕ್ಷವು ವಕ್ಫ್ ಆಸ್ತಿಯ ಅತಿಕ್ರಮಣ, ಅಕ್ರಮ ಮಾರಾಟಕ್ಕೆ ಬೆಂಬಲಿಸಿಕೊಂಡು ಬಂದವರೇ ಜಾಸ್ತಿ ಎಂದು ಅವರು ಹೇಳಿದ್ದಾರೆ.

ತಮ್ಮ ಸಮುದಾಯದ ಭವಿಷ್ಯವು ಉತ್ತಮ ಶಿಕ್ಷಣ, ಆರೋಗ್ಯ, ವಸತಿ ಪಡೆಯುವಂತಾಗಲು ವಕ್ಫ್ ಬೋರ್ಡ್ಗೆ ನೀಡಿದ್ದ ಜಾಗದಲ್ಲಿ ಇಂದು ಪಂಚತಾರ ಹೊಟೇಲ್ ಗಳು ತಲೆ ಎತ್ತಿವೆ. ಬೆಂಗಳೂರು ನಗರದಲ್ಲಿರುವ “ವಿಂಡ್ಸೋರ್ ಮಾನರ್ (Windsor Manor)” ಹೆಸರಿನ ಹೊಟೇಲ್ ವಕ್ಫ್ ಜಮೀನಿನಲ್ಲಿದೆ. ಇದೆಲ್ಲವೂ ಇಂದಿನ ಮಾರುಕಟ್ಟೆಯಲ್ಲಿ ನೂರು ಪಟ್ಟು ಅಧಿಕ ಮೌಲ್ಯವನ್ನ ಹೊಂದಿದೆ. ಅದೇ ರೀತಿ ಲಾಲ್ಬಾಗ್ ಬಳಿ ಇರುವ ಅಲ್ ಅಮೀನ್ ಕಾಲೇಜು ಸಮೀಪದ 7 ಎಕರೆಯಲ್ಲಿ ಮುಂಬೈ ಮೂಲದ ಬಿಲ್ಡರ್ ಕೆಎಚ್ ರೋಡ್ ಎಂಬ ಸಂಸ್ಥೆಯು ಕಟ್ಟಡ ನಿರ್ಮಿಸಿದೆ. ಈ ಜಮೀನನ್ನು ಮಾರುಕಟ್ಟೆ ಮೌಲ್ಯಕ್ಕಿಂತ 2% ಕಡಿಮೆ ರೇಟಿನಲ್ಲಿ ಲೀಸ್ಗೆ ವಹಿಸಲಾಗಿದೆ. ಅದೆಷ್ಟೋ ವಕ್ಫ್ ಭೂಮಿಯನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಅಕ್ರಮವಾಗಿ ತಮ್ಮ ಹೆಸರಿಗೆ ನೋಂದಾಯಿಸಿಕೊಂಡಿದ್ದಾರೆ. ಇವರು ಯಾರು ಕಾನೂನಿಗೆ ಭಯಪಟ್ಟವರೂ ಅಲ್ಲ. ಇನ್ನು ವಕ್ಫ್ ಬೋರ್ಡ್ನಲ್ಲಿರುವ ಸದಸ್ಯರು ಅಷ್ಟೇ ವಕ್ಫ್ ಆಸ್ತಿಯ ಭೂಕಳ್ಳರ ಬಗ್ಗೆಯೇ ಹೆಚ್ಚಿನ ಕಾಳಜಿ ಹೊಂದಿದವರಾಗಿದ್ದಾರೆ. ಹೀಗೆ ಮಾರಾಟವಾಗಲ್ಪಟ್ಟ ಪ್ರತಿಯೊಂದು ಆಸ್ತಿಯು 100 ಕೋಟಿ ರೂಪಾಯಿ ಬೆಲೆ ಬಾಳುವಂತದ್ದಾಗಿದೆ. ಜವಾಬ್ದಾರಿ ಸರಕಾರವಾಗಲೀ, ವಕ್ಫ್ ಇಲಾಖೆ ಸಚಿವರಾಗಲೀ ಇದೆಲ್ಲಕ್ಕೂ ಮೌನವೇ ಸಮ್ಮತಿ ಲಕ್ಷಣಂ ಎನ್ನುವಂತಿದ್ದಾರೆ. ಈ ಮೂಲಕ ಇವರೆಲ್ಲರೂ ಮುಸ್ಲಿಂ ಸಮುದಾಯದ ಪಾಲಿಗೆ ನಿಜಕ್ಕೂ ಆತಂಕಕಾರಿಯಾಗಿದ್ದಾರೆ. ಸಾವಿರಾರು ಕೋಟಿ ಆಸ್ತಿಯನ್ನು ರಾಜಕಾರಣದಲ್ಲಿರುವ ಮುಸ್ಲಿಂ ನಾಯಕರೇ ನುಂಗಿ ನೀರು ಕುಡಿದಿದ್ದಾರೆ ಎಂದು ಆಲಂ ಪಾಶ ಆಕ್ರೋಶ ವ್ಯಕ್ತಪಡಿಸಿದ್ದಾರೆ.   

- Advertisement -

ಮುಸ್ಲಿಂ ಸಮುದಾಯದ ಹಿರಿಯರು ನೀಡಿದ ಭೂಮಿಯನ್ನು ಮಾರ್ಕೆಟ್ ಮೌಲ್ಯಕ್ಕಿಂತಲೂ ಕಡಿಮೆ ದರದಲ್ಲಿ ಲೀಸ್ಗೆ ನೀಡಿದ ಉದಾಹರಣೆಯೂ ಇದೆ. ವಿಶೇಷವಾಗಿ ಪ್ರತಿ ಪಕ್ಷಗಳಲ್ಲೂ ಇರುವ ಮುಸ್ಲಿಂ ನಾಯಕರು ವಕ್ಫ್ ಆಸ್ತಿಯನ್ನು ತಮಗೆ ಬೇಕಾದಂತೆ ಬಳಸಿಕೊಂಡಿದ್ದಾರೆ. ಬೇನಾಮಿಯಾಗಿ ಇರಿಸಿಕೊಂಡಿದ್ದಾರೆ. ಕಾನೂನು ರಚನೆ ಮಾಡಬೇಕಿರುವ ಮುಸ್ಲಿಂ ನಾಯಕರೇ ಇದರ ಹಿಂದೆ ಅಡಗಿದ್ದಾರೆ. ಆದ್ದರಿಂದ ಇದುವರೆಗೂ ಒಬ್ಬನೇ ಒಬ್ಬನಿಗೆ ಶಿಕ್ಷೆ ಆಗಿದ್ದೂ ಇಲ್ಲ ಎಂದು ಅವರು ಹೇಳಿದ್ದಾರೆ.

ಸದಾನಂದ ಗೌಡ, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ವಕ್ಫ್ ಆಸ್ತಿಯನ್ನು ಮರಳಿ ಪಡೆಯುವುದಾಗಿ ತಿಳಿಸಿದ್ದರು. ಆದರೆ ಒಂದು ತುಂಡು ಜಮೀನು ವಾಪಸ್ ಪಡೆಯಲು ಸಾಧ್ಯವಾಗಿಲ್ಲ. ಅಷ್ಟು ಮಾತ್ರವಲ್ಲ, ಒಂದಿಂಚು ಭೂಮಿ ಮರಳಿ ಕೊಡಲೂ ಆಗಿಲ್ಲ, ಆರೋಪಿಗಳ ಬಂಧನವಾಗಿದ್ದೂ ಇಲ್ಲ. ಸಿಬಿಐ, ಎನ್ಐಎ ಯಾವುದು ಈ ಕೇಸಿನ ವಿಚಾರಣೆಗೆ ಬಂದಿಲ್ಲ. 10 ಲಕ್ಷ ರೂಪಾಯಿ ಮೌಲ್ಯದ ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿಯಾದಾಗ ಎನ್ಐಎ ಬಂದಿತ್ತು, ಬಿಜೆಪಿ ಸರಕಾರ ಯುಎಪಿಎ ಹೇರಿತ್ತು. ಆದರೆ, ವಕ್ಫ್ ಆಸ್ತಿ ಕಬಳಿಸಿದವರ ವಿರುದ್ಧ ಕನಿಷ್ಠ ದೂರನ್ನು ದಾಖಲಿಸಲಾಗಿಲ್ಲ.

ಮುಸ್ಲಿಂ ಸಮುದಾಯ ಇಂದಿಗೂ ಕೆಲವೆಡೆ ಭಾರೀ ಸಂಕಷ್ಟದಲ್ಲಿದೆ. ಆದರೆ, ಇತ್ತ ವಕ್ಫ್ ಭೂಮಿ ಮೂರನೇ ವ್ಯಕ್ತಿಗೆ ಮಾರಾಟವಾಗುವುದಕ್ಕೆ ಮುಸ್ಲಿಂ ಸಮದಾಯದ ನಾಯಕರೇ ಕಾರಣೀಕರ್ತರಾಗುತ್ತಿದ್ದಾರೆ. ಇದರ ಪರಿಣಾಮ ಮುಸ್ಲಿಂ ಸಮುದಾಯದ ಹಿರಿಯರು ಸಮುದಾಯ ಶಿಕ್ಷಣ, ಆರೋಗ್ಯ, ವಸತಿಗಳಿಗೆ ಅನುಕೂಲವಾಗಲೆಂದು ಇಲಾಖೆಗೆ ನೀಡಿ ಹೋಗಿರುವ ಜಾಗವು ಶ್ರೀಮಂತರ ಆಸ್ತಿಯಾಗಿ ಬದಲಾಗಿದೆ. ಸೋ ಕಾಲ್ಡ್ ನಾಯಕರ ಕೈಯ್ಯಲ್ಲಿ ಇರುವ ಈ ಜಮೀನುಗಳನ್ನು ವಾಪಸ್ ಪಡೆಯುವುದೇ ಕಷ್ಟ ಎನ್ನುವಂತಾಗಿದೆ. ಅವರ ರಕ್ಷಣೆಗೆ ಶಾಸಕರಿಂದ ಹಿಡಿದು ಎಂಎಲ್ಸಿ, ಸಂಸದರು ಎಲ್ಲರೂ ಒಂದಾಗುತ್ತಾರೆ.

ಖಂಡಿತಾವಾಗಿಯೂ ಈ ನಾಡಿನ ಮುಸ್ಲಿಂ ಸಮುದಾಯಕ್ಕೆ ಉತ್ತಮವಾದ ದಫನ ಭೂಮಿ, ಕೌಶಲ್ಯ ಭರಿತ ತರಬೇತಿ ಹಾಗೂ ಉತ್ತಮ ಶಿಕ್ಷಣ, ಉತ್ತಮ ಆರೋಗ್ಯ ಇದೆಲ್ಲವೂ ಬೇಕಿದೆ. ಆದರೆ, ಅದರ ನಿರ್ಮಾಣಕ್ಕೆಂದು ಮೀಸಲಿರಿಸಿದ್ದ ಜಾಗವು ಸೋಕಾಲ್ಡ್ ಮುಸ್ಲಿಂ ನಾಯಕರ ಪಾಲಾಗಿದೆ. ಸಾಮಾನ್ಯ ವರ್ಗದ ಮುಸ್ಲಿಮರಿಗೆ ತಮ್ಮ ಹಕ್ಕಿನ ವಕ್ಫ್ ಭೂಮಿಗಳ ಮೇಲೆ ತಮ್ಮ ಹಕ್ಕುಸ್ವಾಮ್ಯ ನಡೆಸಲು ಸಾಧ್ಯವಾಗುತ್ತಿಲ್ಲ. ಇನ್ನೇನಾದ್ರೂ ಮುಸ್ಲಿಮರು ತಮ್ಮ ಹಕ್ಕುಗಳನ್ನ ಕೇಳಿದರೆ, ಅವರನ್ನ ಬೆದರಿಸುವ ಕೆಲಸವೂ ನಡೆಯುತ್ತದೆ. ಅಷ್ಟೇ ಅಲ್ಲ, ಇಡೀ ವಕ್ಫ್ ಬೋರ್ಡ್ ನಿಯಂತ್ರಣವು ಇಂದಿಗೂ ಪ್ರಭಾವಿಗಳ, ಸೋ ಕಾಲ್ಡ್ ಮುಸ್ಲಿಂ ನಾಯಕರ ಕೈವಶದಲ್ಲಿಯೇ ಇದೆ ಅನ್ನೋದನ್ನು ಮರೆಯುವಂತಿಲ್ಲ ಎಂದು ಆಲಂ ಪಾಶ ಬೇಸರ ವ್ಯಕ್ತಪಡಿಸಿದ್ದಾರೆ.

Join Whatsapp