ವೋಟರ್ ಐಡಿ ಹಗರಣ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಹೆಚ್.ಡಿ. ಕುಮಾರಸ್ವಾಮಿ ಆಗ್ರಹ

Prasthutha|

ಚುನಾವಣಾ ಆಯೋಗಕ್ಕೆ ಒತ್ತಾಯ

- Advertisement -

ಹೆಬ್ಬೆಟ್ ಆಯೋಗ ಆಗುವುದು ಬೇಡ ಎಂದ ಕುಮಾರಸ್ವಾಮಿ

ಮಾಲೂರು/ಕೋಲಾರ: ಮತದಾರರ ದತ್ತಾಂಶ ಕಳುವಿನ ಆರೋಪ ದೊಡ್ಡ ಹಗರಣವಾಗುವ ರೀತಿ ಕಾಣುತ್ತಿದ್ದು, ಸಂಬಂಧಪಟ್ಟವರ ಮೇಲೆ ಚುನಾವಣಾ ಆಯೋಗ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ ಅವರು ಆಗ್ರಹಿಸಿದ್ದಾರೆ.

- Advertisement -

ಬಿಜೆಪಿಗೆ ಮತ ಹಾಕಲ್ಲ ಎಂದ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಕೈ ಬಿಟ್ಟಿದ್ದಾರೆ ಎಂಬ ಆರೋಪ ನಿಜಕ್ಕೂ ಗಂಭೀರವಾದ ವಿಚಾರ. ಸರ್ಕಾರವೇ ನೇರವಾಗಿ ಭಾಗಿಯಾಗಿರುವಾಗ ಸತ್ಯಾಂಶ ಹೇಗೆ ಹೊರಬರುತ್ತದೆ ಎಂದು ಅವರು ಹೇಳಿದ್ದಾರೆ.

ಕೋಲಾರ ಜಿಲ್ಲೆಯ ಬಂಗಾರಪೇಟೆ ಕ್ಷೇತ್ರದ ಮಾಗೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಆಯೋಗ ಸ್ವಾಯತ್ತ ಸಂಸ್ಥೆಯಾಗಿದ್ದು, ಈ ಬಗ್ಗೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು.ಇಲ್ಲದಿದ್ದರೆ ಹೆಸರಿಗೆ ಹೆಬ್ಬೆಟ್ಟಿನ ಆಯೋಗ ಎಂಬಂತೆ ಆಗಬಾರದು ಎಂದರು.

ಪಂಚರತ್ನ ಯಾತ್ರೆಯಲ್ಲಿರುವ ಕಾರಣ ಮತದಾರರ ಹೆಸರನ್ನು ಪಟ್ಟಿಯಲ್ಲಿ ಕೈ ಬಿಟ್ಟ ವಿಚಾರದ ಬಗ್ಗೆ ಅಷ್ಟೊಂದು ಗಮನ ಹರಿಸಿರಲಿಲ್ಲ. ವಿರೋಧ ಪಕ್ಷಗಳಿಗೆ ಮತ ಬರುವ ದತ್ತಾಂಶ ಸಂಗ್ರಹ ಮಾಡಿದ್ದರೆ ಎಂಬ ಆರೋಪವಿದೆ. ಈ ಹಿಂದಿನ ಚುನಾವಣೆಯಲ್ಲಿ ಯಾರಿಗೆ ಮತ ಹಾಕಲಾಗಿತ್ತು. ಈಗ ಯಾರಿಗೆ ಮತ ಹಾಕುತ್ತೀರಿ ಎಂದೆಲ್ಲಾ ಕೇಳಿದ್ದಾರೆ ಎಂಬ ಆರೋಪವಿದೆ ಎಂದು ಹೇಳಿದರು.

ತೆಲಂಗಾಣ ಮುಖ್ಯಮಂತ್ರಿ ಶಾಸಕರ ಖರೀದಿ ಯತ್ನಕ್ಕೆ ಸಂಬಂಧಿಸಿದಂತೆ ಹಲವಾರು ದಾಖಲೆ ಸಮೇತ ಬಹಿರಂಗ ಮಾಡಿದ್ದರು. ಕರ್ನಾಟಕದ ಮೈತ್ರಿ ಸರ್ಕಾರವನ್ನೂ ಈಗ ಆರೋಪಿತರೆ ತೆಗೆದಿದ್ದು. ಯಾವುದೇ ಜನ ಬೆಂಬಲವಿಲ್ಲ, ಕುತಂತ್ರ ರಾಜಕಾರಣ ಮಾಡುತ್ತಾರೆ. ರಾಜಿಗೆ ಮುಲಾಜಿಗೆ ಒಳಪಡದೆ ತೆಲಾಂಗಣ ಮುಖ್ಯಮಂತ್ರಿ ಕ್ರಮಕ್ಕೆ ಮುಂದಾಗಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಇಂಥವರಿಗೆ ತಕ್ಕಪಾಠ ಆಗಬೇಕು ಎಂದರು.

ಕೊರೆವ ಚಳಿಯಲ್ಲಿ ಪಂಚರತ್ನ ರಥಯಾತ್ರೆ:

ಕೊರೆವ ಚಳಿಯಲ್ಲೂ ಮಕ್ಕಳು ಮಹಿಳೆಯರು ಯುವಕರು ಪಂಚರತ್ನ ರಥಯಾತ್ರೆಯಲ್ಲಿ ಭಾಗಿಯಾಗುತ್ತಿದ್ದಾರೆ. ಇದು ನನ್ನ ಮುಂದಿನ ನೂರು ದಿನಗಳ ಹೋರಾಟಕ್ಕೆ ಉತ್ಸಾಹ ತುಂಬಿದೆ. ರಾತ್ರಿ ಸಂವಾದದಲ್ಲಿ ಮುನಿವೆಂಕಟಪ್ಪ ಎಂಬ ಸ್ಥಳೀಯರೊಬ್ಬರು ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಪದವೀಧರ ಯುವಕರಿಗೆ ಉದ್ಯೋಗವಿಲ್ಲ. ಸರ್ಕಾರದಲ್ಲೂ ಎರಡರಿಂದ ಮೂರು ಲಕ್ಷ ಹುದ್ದೆಗಳು ಖಾಲಿ ಇವೆ ಎಂಬ ಅವರ ಪ್ರಶ್ನೆಗಳಿಗೆ ಎಎಲ್ಲಾ ಉತ್ತರ ಪಂಚರತ್ನದಲ್ಲಿ ಅಡಗಿದೆ ಎಂದು ಮಾಜಿ ಮುಖ್ಯಮಂತ್ರಿ ಅವರು ತಿಳಿಸಿದರು.

ಜನವರಿ ಮೂರರಿಂದ ಮಾರ್ಚ್ 15 ರವರೆಗೆ ಎರಡನೇ ಹಂತದ ಯಾತ್ರೆ ನಡೆಯಲಿದೆ. ಈಗ ಜನರಿಗೆ ಪಂಚರತ್ನ ಯೋಜನೆಗಳ ಬಗ್ಗೆ ಅರಿವಾಗುತ್ತಿದೆ ಎಂದು ತಿಳಿಸಿದ್ದಾರೆ.
ಪಂಚರತ್ನ ಯೋಜನೆಗಳು ಜಾರಿಗೆ ಬಂದರೆ ಸ್ವರ್ಗದ ವಾತವರಣ ನಿರ್ಮಾಣವಾಗುತ್ತೆ ಎಂದು ಕೆಲ ಮಾದ್ಯಮಗಳಲ್ಲಿ ಅಂಕಣಗಳು ಬಂದಿವೆ. ಇದು ನನಗೆ ಶಾರೀರಿಕವಾಗಿ, ಮಾನಸಿಕವಾಗಿ ಮತ್ತಷ್ಟು ಸದೃಢಗೊಳಿಸಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ಮಾಜಿ ಸದಸ್ಯರಾದ ರಮೇಶ ಗೌಡ, ಚೌಡರೆಡ್ಡಿ ತೂಪಲ್ಲಿ, ಬಂಗಾರಪೇಟೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು, ಮಾಲೂರು ಅಭ್ಯರ್ಥಿ ರಾಮೇಗೌಡ ಮುಂತಾದವರು ಉಪಸ್ಥಿತರಿದ್ದರು.



Join Whatsapp