ಮಂಡ್ಯ: ಮೈಸೂರು- ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಖಾಸಗಿ ವೋಲ್ವೊ ಬಸ್ಸೊಂದು ಚಲಿಸುವಾಗಲೇ ಹೊತ್ತಿ ಉರಿದ ಘಟನೆ ಶ್ರೀರಂಗಪಟ್ಟಣದಲ್ಲಿ ಶನಿವಾರ ನಡೆದಿದ್ದು, ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಎಲ್ಲಾ 30 ಪ್ರಯಾಣಿಕರು ಪಾರಾಗಿದ್ದಾರೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಬಳಿ ಘಟನೆ ನಡೆದಿದ್ದು, ಹೆದ್ದಾರಿಯಲ್ಲಿ ಆತಂಕ ಸೃಷ್ಟಿಯಾಗಿದೆ.
ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬಸ್’ನಲ್ಲಿ ಏಕಾಏಕಿ ಹೊಗೆ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಸಾರ್ವಜನಿಕರು ಕೂಡಲೇ ಬೊಬ್ಬೆ ಹೊಡೆದು ಬಸ್ಸನ್ನು ನಿಲ್ಲಿಸಿದ್ದಾರೆ. ಅಪಾಯದ ಸೂಚನೆ ಅರಿತ ಬಸ್ ಚಾಲಕ ಬಸ್ಸನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಎಲ್ಲಾ ಪ್ರಯಾಣಿಕರನ್ನೂ ಕೆಳಗೆ ಇಳಿಸಿದ್ದಾರೆ.
ಪ್ರಯಾಣಿಕರು ತಮ್ಮ ಲಗೇಜ್ ನೊಂದಿಗೆ ಲಗುಬಗೆಯಿಂದ ಇಳಿದು ಸುರಕ್ಷಿತ ಸ್ಥಳಕ್ಕೆ ಓಡಿ ಹೋಗಿದ್ದಾರೆ. ಆದರೆ ತೂಕ ಜಾಸ್ತಿ ಇದ್ದ ಲಗೇಜ್ ಹೊತ್ತಯ್ಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕೆಲವರ ಲಗೇಜ್ ಬಸ್ಸಿನಲ್ಲಿ ಸುಟ್ಟು ಹೋಗಿವೆ.
ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ದುರಂತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.