ಕೋಝಿಕ್ಕೋಡ್: ದುಬೈನಲ್ಲಿ ಆತ್ಮಹತೆಗೈದಿದ್ದಾಳೆಂದು ಹೇಳಲಾಗಿದ್ದ ವ್ಲಾಗರ್ ರಿಫಾ ಮೆಹ್ನು ನಿಗೂಢ ಸಾವಿನ ಕುರಿತಂತೆ ಕೋಝಿಕ್ಕೋಡ್ ಪೊಲೀಸರು ಪ್ರಕರಣ ದಾಖಲಿಸಿದ್ದರು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಸ್ಪಷ್ಟತೆಗಾಗಿ ಮತ್ತು ತನಿಖೆಗೆ ಪೂರಕವಾಗಿ ಇಂದು ಅವರ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ. ವಿಧಿವಿಜ್ಞಾನ ತಂಡವು ವೈಜ್ಞಾನಿಕ ಮಾದರಿಗಳನ್ನು ಸಂಗ್ರಹಿಸುತ್ತಿದೆ.
ಮಾರ್ಚ್ 1 ರಂದು ದುಬೈನ ಫ್ಲ್ಯಾಟ್ ನಲ್ಲಿ ರಿಫಾ ಮೆಹ್ನು ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಬಳಿಕ ಹುಟ್ಟೂರಿನಲ್ಲಿ ಮಾರ್ಚ್ 3 ರಂದು ಧಪನ ಮಾಡಲಾಗಿತ್ತು. ಈ ಮಧ್ಯೆ ದುಬೈನಲ್ಲಿ ರಿಫಾಳ ಮರಣೋತ್ತರ ಪರೀಕ್ಷೆ ನಡೆಸುವ ನೆಪದಲ್ಲಿ ಆಕೆಯ ಪತಿ ಮತ್ತು ಸ್ನೇಹಿತರು ರಿಫಾಗೆ ಮೋಸ ಮಾಡಿದ್ದಾರೆ ಎಂದು ಕುಟುಂಬ ಆರೋಪಿಸಿತ್ತು. ಕುಟುಂಬಸ್ಥರ ದೂರಿನ ಮೇರೆಗೆ ಕಾಸರಗೋಡಿನ ಆಕೆಯ ಪತಿ ಮೆಹ್ನಾಜ್ ವಿರುದ್ಧ ಕಾಕೂರು ಪೊಲೀಸರು ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಕಾಕೂರು ಪೊಲೀಸರು ಮಾನಸಿಕ ಮತ್ತು ದೈಹಿಕ ಚಿತ್ರಹಿಂಸೆಯು ರಿಫಾಳ ಸಾವಿಗೆ ಕಾರಣವಾಗಿರಬಹುದು, ಈ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸುವುದೇ ಸೂಕ್ತ ಎಂದು ನಿರ್ಧರಿಸಿ ಅನುಮತಿ ನೀಡಿತ್ತು.
ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿ ರಿಫಾ ಹಾಗೂ ಮೆಹ್ನಾಜ್ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು, ರಿಫಾ ಮೆಹ್ನು ಕೆಲಸದ ನಿಮಿತ್ತ ದುಬೈಗೆ ತೆರಳಿದ್ದರು.