ಉತ್ತರಾಖಂಡದ ಹರಿದ್ವಾರದಲ್ಲಿ ತಥಾಕಥಿತ ಹಿಂದುತ್ವವಾದಿ ಧರ್ಮಗುರುಗಳು ಇತ್ತೀಚಿಗೆ ಧರ್ಮ ಸಂಸತ್ತನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರೂ ಭಾಗವಹಿಸಿದ್ದರು. ಸಭೆಯ ಉದ್ದಕ್ಕೂ ದ್ವೇಷಪೂರಿತ ಭಾಷಣಗಳನ್ನು ಮಾಡಿ ಮುಸ್ಲಿಮರನ್ನು ಅವಹೇಳನ ಮಾಡಲಾಯಿತು. ಬಹಿರಂಗವಾಗಿ ಭಾರತೀಯ ಮುಸ್ಲಿಮರನ್ನು ನರಮೇಧ ನಡೆಸುವಂತೆ ಕರೆ ನೀಡಲಾಯಿತು. ಈ ದ್ವೇಷ ಹರಡುವ ಭಾಷಣಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಡಿದವು. ಒಂದು ನಿರ್ದಿಷ್ಟ ಸಮುದಾಯದ ವಿರುದ್ಧ ದ್ವೇಷ ಹರಡಿದ ಹಾಗೂ ಅವರ ನರಮೇಧಕ್ಕೆ ಬಹಿರಂಗ ಕರೆ ನೀಡಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಸೆಕ್ಷನ್ ಗಳ ಅಡಿಯಲ್ಲಿ ಕ್ರಮಕೈಗೊಳ್ಳಬೇಕಾದ ವ್ಯವಸ್ಥೆ ಅದನ್ನು ಲಘವಾಗಿ ಪರಿಗಣಿಸಿತು. ಅತ್ಯಂತ ಪ್ರಧಾನವಾದ ಸಾಂವಿಧಾನಿಕ ಹುದ್ದೆಯಲ್ಲಿ ಕುಳಿತಿರುವ ಪ್ರಧಾನಿ ಮೋದಿಯವರೇ ಇದರ ಬಗ್ಗೆ ಮೌನ ವಹಿಸಿರುವಾಗ ಕಠಿಣ ಕ್ರಮದ ನಿರೀಕ್ಷೆ ಇಟ್ಟುಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ. ಕಾಟಾಚಾರಕ್ಕೆ ಎಂಬಂತೆ ಪೊಲೀಸರು ಕೆಲವರ ವಿರುದ್ಧ ದುರ್ಬಲ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿದರು.
ದ್ವೇಷ ಭಾಷಣಗಳ ವಿರುದ್ಧ #stopIndianmuslimgenocide ಹೆಸರಿನಲ್ಲಿ ನಡೆದ ಟ್ವಿಟ್ಟರ್ ಅಭಿಯಾನಕ್ಕೆ ಜಗತ್ತಿನಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಯಿತು. ಘಟನೆಗೆ ಸಂಬಂಧಿಸಿ ಮೋದಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಿವಿಧ ಧರ್ಮಗಳ ಅನಿವಾಸಿ ಭಾರತೀಯ ಸಂಘಟನೆಗಳು ದ್ವೇಷ ಭಾಷಣಕಾರರ ಬಂಧನಕ್ಕೆ ಆಗ್ರಹಿಸಿದವು. ಖ್ಯಾತ ಚಿಂತಕರು, ಮಾನವ ಹಕ್ಕು ಹೋರಾಟಗಾರರು ಈ ಅಭಿಯಾನಕ್ಕೆ ಕೈಜೋಡಿಸಿದ್ದರು. ಆಂತರಿಕ ಭಯೋತ್ಪಾದಕರು ಇಂತಹ ದೇಶದ್ರೋಹದ ಕೃತ್ಯಗಳನ್ನು ನಡೆಸುವಾಗ ಅದಕ್ಕೆ ಎದುರಾಗಿ ಪ್ರತಿರೋಧ ಒಡ್ಡುವ ಮನಸ್ಸುಗಳೂ ಜಾಗೃತವಾಗಿವೆ ಎಂಬುದು ಸಮಾಧಾನಕರ ಸಂಗತಿ.
ಇನ್ನು ಧರ್ಮ ಸಂಸತ್ತಿನ ಬಗ್ಗೆ ಹೇಳುವುದಾದರೆ ಅದರ ಇತಿಹಾಸ ಶತಮಾನಕ್ಕೂ ಹಳೆಯದು. 1893ರಲ್ಲಿ ಅಂದರೆ ಇಂದಿಗೆ 128 ವರ್ಷಗಳ ಹಿಂದೆ ಅಮೆರಿಕಾದ ಚಿಕಾಗೋದಲ್ಲಿ ನಡೆದ ಧರ್ಮ ಸಂಸತ್ತಿನಲ್ಲಿ ರಾಮಕೃಷ್ಣ ಪರಮಹಂಸರ ಶಿಷ್ಯ ಸ್ವಾಮಿ ವಿವೇಕಾನಂದ ಭಾರತದ ಪ್ರತಿನಿಧಿಯಾಗಿದ್ದರು. ಅಂದಿನ ಧರ್ಮ ಸಂಸತ್ತಿನಲ್ಲಿ ಅವರು ಭಾರತದ ಮಾನವತಾವಾದ, ಜಾತ್ಯತೀತತೆ ಮತ್ತು ವಸುದೈವ ಕುಟುಂಬಕಂ(ಇಡೀ ವಿಶ್ವವೇ ಒಂದು ಕುಟುಂಬ)ನ ಪರಂಪರೆಯನ್ನು ಒತ್ತಿ ಹೇಳಿದ್ದರು. ಸಹೋದರ-ಸಹೋದರಿ ಎಂದು ಸಂಬೋಧಿಸಿ ಅವರು ಸರ್ವ ಧರ್ಮೀಯರನ್ನೊಳಗೊಂಡ ಭ್ರಾತೃತ್ವದ ಸಂದೇಶವನ್ನು ಸಾರಿದ್ದರು. ಎಲ್ಲಾ ಧರ್ಮಗಳನ್ನು ಗೌರವಿಸುವ ಒಂದು ಜಾತ್ಯತೀತ ಭಾರತದ ಕಲ್ಪನೆಯನ್ನು ಅವರು ಅಲ್ಲಿ ಮಂಡಿಸಿದ್ದರು. ಕೋಮುವಾದ, ಮತಾಂಧತೆ ಈ ಭೂಮಿಗೆ ಹಾನಿ ಉಂಟು ಮಾಡುತ್ತಿದ್ದು, ಈ ಧರೆಯಲ್ಲಿ ಹರಿದ ರಕ್ತಪಾತವು ಹಲವು ನಾಗರಿಕತೆಗಳನ್ನು ಮತ್ತು ದೇಶಗಳನ್ನು ನಾಶಪಡಿಸಿವೆ ಎಂದು ಎಚ್ಚರಿಸಿದ್ದರು. ಇಂತಹ ಭಯಾನಕ ರಾಕ್ಷಸರು ಇಲ್ಲದಿರುತ್ತಿದ್ದರೆ, ಮಾನವ ಸಮಾಜ ಇಂದು ಬಹಳಷ್ಟು ಉನ್ನತಿಗೆ ಏರುತ್ತಿತ್ತು ಎಂದಿದ್ದರು. ಶತಮಾನದ ಹಿಂದೆ ಅವರು ಮಂಡಿಸಿದ ವಿಚಾರ ಇಂದಿಗೂ ಚರ್ಚಾರ್ಹವಾಗಿದೆ.
ಹಿಂದು ಧರ್ಮದ ಮೇಲೆ ಇಂದು ಹಿಂದುತ್ವದ ಕರಿನೆರಳು ಬೀರಿದೆ. 19ನೇ ಶತಮಾನದ ಅಂತ್ಯದಲ್ಲಿ ರಾಜಕೀಯ ಅಸ್ತ್ರವಾಗಿ ಬಳಕೆಗೆ ಬಂದ ಹಿಂದುತ್ವ ಪದವು ಇಂದು ದ್ವೇಷ ಹರಡುವುದರಲ್ಲಿ ಯಶಸ್ಸು ಕಂಡಿದೆ. ಹಿಂದುತ್ವವು ಇಂದು ದ್ವೇಷ, ಹಿಂಸೆಯನ್ನು ಸ್ವೀಕರಿಸುವ ಒಂದು ಮನೋಸ್ಥಿತಿಯನ್ನು ಆಳವಾಗಿ ಸೃಷ್ಟಿಸಿಬಿಟ್ಟಿದೆ. ಲವ್ ಜಿಹಾದ್, ಗುಂಪು ಹತ್ಯೆ, ದ್ವೇಷ ಹಾಗೂ ಪ್ರಚೋದನಕಾರಿ ಭಾಷಣ ಮೊದಲಾದ ರೂಪದಲ್ಲಿ ಅದು ಗಲ್ಲಿ ಗಲ್ಲಿಗೂ ತಲುಪಿದೆ. ಅದರ ಆಧಾರದಲ್ಲಿಯೇ ಚುನಾವಣಾ ಫಲಿತಾಂಶಗಳು ನಿರ್ಣಯವಾಗುತ್ತಿವೆ. ಹಿಂದೂ ಸಂತರು ದೇಶದ ಏಕತೆ, ಸಹಬಾಳ್ವೆ, ಶಾಂತಿ ಮತ್ತು ಸಾಮರಸ್ಯದ ವಿಚಾರಗಳನ್ನು ಬೋಧಿಸುತ್ತಿದ್ದರು ಎಂಬುದನ್ನು ಇತಿಹಾಸ ಕಲಿಸುತ್ತಿದ್ದರೆ, ಸನ್ಯಾಸಿಗಳ ವೇಷ ತೊಟ್ಟಿರುವ ಹಿಂದುತ್ವವಾದಿಗಳು ಇಂದು ಧರ್ಮದ ಹೆಸರಿನಲ್ಲಿ ದ್ವೇಷ ಹರಡುವುದರಲ್ಲಿ ವ್ಯಸ್ತರಾಗಿದ್ದಾರೆ. ಯಾವ ಧರ್ಮವನ್ನು ಇಂದು ಮಾನವತಾವಾದ ಮತ್ತು ಜಾತ್ಯತೀತ ಎಂದು ಸ್ವಾಮಿ ವಿವೇಕಾನಂದರವರು ಬಣ್ಣಿಸಿದ್ದರೋ, ಅದೇ ಧರ್ಮವನ್ನು ಇಂದು ದ್ವೇಷ ಹರಡುವ ಅಸ್ತ್ರವನ್ನಾಗಿ ಬಳಸಲಾಗುತ್ತಿದೆ. ಶಿಕಾಗೋದಲ್ಲಿ ನಡೆದ ಧರ್ಮ ಸಂಸತ್ತಿನ ಬಗ್ಗೆ ಹೆಮ್ಮೆ ಪಡುವ ಹಿಂದೂಗಳು ಇಂದು ಹರಿದ್ವಾರದ ದ್ವೇಷ ಸಂಸತ್ತಿಗೆ ತಲೆತಗ್ಗಿಸಬೇಕಾಗಿ ಬಂದಿದೆ. ಹರಿದ್ವಾರದಲ್ಲಿ ನಡೆದ ಹಿಂದುತ್ವ ಧರ್ಮ ಸಂಸತ್ತು ಹಿಂದು ಧರ್ಮಕ್ಕೆ ಮಾಡಿದ ಅವಮಾನ ಮಾತ್ರವಲ್ಲ, ವಿವೇಕಾನಂದರ ಎಲ್ಲರನ್ನೊಳಗೊಂಡ ಕಲ್ಪನೆಗೂ ವಿರುದ್ಧವಾಗಿದೆ. ಜೊತೆಗೆ ಜಾತ್ಯತೀತ ಭಾರತದಲ್ಲಿ ಇಂತಹ ಘಟನೆಗಳು ಶಿಕ್ಷಾರ್ಹ ಅಪರಾಧವೂ ಆಗಿದೆ.
ಭಾರತದ ಬಹುತ್ವ ಪರಂಪರೆಯನ್ನು ಉಳಿಸಬೇಕಾದರೆ, ದ್ವೇಷ ಹರಡುವ ಇಂತಹ ಶಕ್ತಿಗಳನ್ನು ಮೆಟ್ಟಿ ನಿಲ್ಲಬೇಕಾಗಿದೆ. ದೇಶವನ್ನು ಅರಾಜಕತೆಗೆ ಹಾಗೂ ವಿನಾಶಕ್ಕೆ ಕೊಂಡೊಯ್ಯುವ ದ್ವೇಷದ ಸಿದ್ಧಾಂತಗಳ ನಿರ್ಮೂಲನೆಯಿಂದ ಮಾತ್ರವೇ ಜಾತ್ಯತೀತ ಭಾರತದ ಉಳಿವು ಸಾಧ್ಯವಾಗಲಿದೆ.