ವಿಟ್ಲ | ಶೈಕ್ಷಣಿಕ ಕಾರ್ಯಾಗಾರಕ್ಕೆ ಅಡ್ಡಿ: ಮುಸ್ಲಿಮ್ ಜಸ್ಟೀಸ್ ಫೋರಂ ಖಂಡನೆ

Prasthutha|

ವಿಟ್ಲ: ಅಡ್ಯನಡ್ಕದಲ್ಲಿ ನಡೆದ ಶೈಕ್ಷಣಿಕ ಕಾರ್ಯಾಗಾರಕ್ಕೆ ಸಂಘಪರಿವಾರದ ಕಾರ್ಯಕರ್ತರು ಅಡ್ಡಿಪಡಿಸಿದ್ದನ್ನು ಮುಸ್ಲಿಮ್ ಜಸ್ಟೀಸ್ ಫೋರಂ ತೀವ್ರವಾಗಿ ಖಂಡಿಸಿದೆ.

- Advertisement -


ಈ ಕುರಿತು ಪತ್ರಿಕಾ ಪ್ರಕಟನೆ ಹೊರಡಿಸಿರುವ ಮುಸ್ಲಿಮ್ ಜಸ್ಟೀಸ್ ಫೋರಂ ಅಧ್ಯಕ್ಷ ಇರ್ಷಾದ್ ಯು.ಟಿ, ವಿಟ್ಲ ಅಡ್ಯನಡ್ಕದಲ್ಲಿ ನುಸ್ರತುಲ್ ಮಸಾಕೀನ್ ಸಮಾಜ ಸೇವಾ ಸಂಘಟನೆ ವಿವಿಧ ಕಾರ್ಯಕ್ರಮಗಳ ಮೂಲಕ ಕಳೆದ ಹದಿನೈದು ವರ್ಷಗಳಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ಹಾಗೂ ಸಮಾಜದಲ್ಲಿ ಶೈಕ್ಷಣಿಕ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಮಾಡಿಕೊಂಡಿದೆ. ಇದರ ಮುಂದುವರಿದ ಭಾಗವಾಗಿ ಎಸ್ ಎಸ್ ಎಲ್ ಸಿ ಹಾಗೂ ಪದವಿಪೂರ್ವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಾರ್ಯಾಗಾರವನ್ನು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮವನ್ನು ತಪ್ಪಾಗಿ ಅರ್ಥೈಸಿಕೊಂಡ ಕೆಲವರು ಈ ಕಾರ್ಯಾಗಾರದಲ್ಲಿ ಇಸ್ಲಾಂ ಬಗ್ಗೆ ಪ್ರವಚನವನ್ನು ನೀಡಲಾಗುತ್ತದೆ ಎಂದು ಆ ಸಭೆಗೆ ಬಂದು ಅಡ್ಡಿಪಡಿಸಿದ್ದಲ್ಲದೆ, ಹಿಂದೂ ವಿದ್ಯಾರ್ಥಿಗಳು ಈ ಕಾರ್ಯದಲ್ಲಿ ಭಾಗವಹಿಸಬಾರದಾಗಿ ತಾಕೀತು ಮಾಡಿದ್ದಾರೆ. ಇದು ನಿಜಕ್ಕೂ ಅಪಾಯಕಾರಿ ಹಾಗೂ ಅಸಾಂವಿಧಾನಿಕ. ಇಂತಹ ಕೃತ್ಯಗಳು ಇನ್ನು ಮುಂದೆ ನಡೆಯಬಾರದು, ಮುಂದುವರೆದರೆ ಸಮಾಜಕ್ಕೆ ಇದು ಅಪಾಯ ಎಂದು ತಿಳಿಸಿದ್ದಾರೆ.


ವಿದ್ಯಾರ್ಥಿಗಳ ಮನಸ್ಸಿನಲ್ಲಿ ಹಿಂದೂ ಮುಸ್ಲಿಂ ಎಂಬ ಕೋಮು ಭಾವನೆಯನ್ನು ಬಿತ್ತರಿಸಿ, ಮನದಲ್ಲಿ ಭೀತಿ ಹುಟ್ಟಿಸುವ ತಂತ್ರಗಾರಿಕೆಯನ್ನು ಪ್ರತಿಯೊಬ್ಬರೂ ಖಂಡಿಸಲೇಬೇಕಿದೆ. ದೇಶದಲ್ಲಿ ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದು, ಘಟನೆಗಳು ಮರುಕಳಿಸದಂತೆ ಮತ್ತು ಇದರ ಹಿಂದಿರುವ ಎಲ್ಲರನ್ನೂ ತಕ್ಷಣವೇ ಬಂಧಿಸಿ, ಕೂಲಂಕಷವಾಗಿ ತನಿಖೆ ನಡೆಸಬೇಕಿದೆ ಮತ್ತು ಆಯೋಜಕರ ವಿರುದ್ಧ ಹಾಕಿದಂತಹ ಕೇಸುಗಳನ್ನು ತಕ್ಷಣವೇ ರದ್ದುಪಡಿಸಿ, ದಾಂಧಲೆ ನಡೆಸಿರುವವರ ಮೇಲೆ ಜಾಮೀನು ರಹಿತ ಕೇಸುಗಳನ್ನು ಹಾಕಬೇಕೆಂದು ಅವರು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.



Join Whatsapp