►’ಇಂಡಿಯಾ ಹೆಸರು ನೀಡಿದ್ದು ಬ್ರಿಟಿಷರು’ ಎಂದ ಮಾಜಿ ಕ್ರಿಕೆಟಿಗನಿಗೆ ‘ಕ್ರಿಕೆಟ್ ಕೂಡ ಅದೇ ಬ್ರಿಟಿಷರು ನೀಡಿದ ಆಟ’ ಎಂದ ನೆಟ್ಟಿಗರು
ಹೊಸದಿಲ್ಲಿ: ಮುಂಬರುವ ವಿಶೇಷ ಅಧಿವೇಶನದಲ್ಲಿ ಇಂಡಿಯಾ ಹೆಸರನ್ನು ‘ಭಾರತ್’ ಎಂದು ಬದಲಾಯಿಸಲಾಗುವ ಕುರಿತು ಹೊಸ ಚರ್ಚೆ ಹುಟ್ಟಿಕೊಂಡಿರುವ ಬೆನ್ನಲ್ಲೇ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಬಿಸಿಸಿಐ ಎದುರು ಬೇಡಿಕೆಯೊಂದನ್ನು ಇಟ್ಟಿದ್ದಾರೆ.
ಮುಂದಿನ ತಿಂಗಳು ಆರಂಭವಾಗಲಿರುವ ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಹೆಸರನ್ನು ಬದಲಾಯಿಸುವಂತೆ ವೀರೇಂದ್ರ ಸೆಹ್ವಾಗ್ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಗೆ ಮನವಿ ಮಾಡಿದ್ದಾರೆ. ಇಂಡಿಯಾ ಬದಲಿಗೆ ಭಾರತದ ಹೆಸರಿನಲ್ಲಿ ತಂಡವನ್ನು ಕಣಕ್ಕಿಳಿಸಬೇಕು ಎಂದು ಸೆಹ್ವಾಗ್ ತಮ್ಮ ಟ್ವೀಟ್ನಲ್ಲಿ ಕೇಳಿಕೊಂಡಿದ್ದಾರೆ.
ಹೆಸರು ನಮ್ಮಲ್ಲಿ ಹೆಮ್ಮೆ ಹುಟ್ಟಿಸುವಂತಿರಬೇಕು ಎಂದು ನಾನು ಯಾವಾಗಲೂ ನಂಬಿದ್ದೇನೆ ಎಂದು ತಮ್ಮ ಟ್ವೀಟ್ನಲ್ಲಿ ಬರೆದುಕೊಂಡಿರುವ ಸೆಹ್ವಾಗ್, ನಾವು ಭಾರತೀಯರು ಆದರೆ ಬ್ರಿಟಿಷರು ನಮ್ಮ ದೇಶಕ್ಕೆ ಇಂಡಿಯಾ ಎಂದು ಹೆಸರನ್ನು ಇಟ್ಟರು. ಹೀಗಾಗಿ ಟೀಂ ಇಂಡಿಯಾ ಹೆಸರನ್ನೂ ಬದಲಾಯಿಸಬೇಕು ಎಂದು ಸೆಹ್ವಾಗ್ ಮನವಿ ಮಾಡಿದ್ದಾರೆ.
ಕ್ರಿಕೆಟ್ ಅದೇ ಬ್ರಿಟಿಷರು ನೀಡಿದ ಆಟ. ನಮ್ಮಲ್ಲಿ ಹೆಮ್ಮೆ ಮೂಡಿಸಲು ನೀವು ಕೂಡ ಭಾರತ ಪರಿಚಯಿಸಿದ ಕಬಡ್ಡಿ ಆಡಬೇಕಿತ್ತು ಎಂದು ನೆಟ್ಟಿಗರು ಸೆಹ್ವಾಗ್ ಟ್ವೀಟ್’ಗೆ ಪ್ರತಿಕ್ರಿಯಿಸಿದ್ದಾರೆ.