ಬೆಳ್ತಂಗಡಿ : ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯಾಧ್ಯಂತ ವೀಕ್ ಎಂಡ್ ಕರ್ಪ್ಯೂ ಜಾರಿಯಲ್ಲಿರುವ ನಡುವೆ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ಎಂಬಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ತುಂಗಪ್ಪ ಬಂಗೇರ ಅವರ ನೇತೃತ್ವದಲ್ಲಿ ಸಾಮೂಹಿಕ ವಿವಾಹವೊಂದು ನಡೆಯುತ್ತಿದ್ದು, ವೀಕೆಂಡ್ ಕರ್ಫ್ಯೂಗೂ ಜನರು ಕ್ಯಾರೇ ಎಂದಿಲ್ಲ.
ವೀಕ್ ಎಂಡ್ ಕರ್ಪ್ಯೂವನ್ನೂ ಗಾಳಿಗೆ ತೂರಿರುವಂತ ಜನರು, ಸಾಮಾಜಿಕ ಅಂತರವಿಲ್ಲದೇ, ಮಾಸ್ಕ್ ಕೂಡ ಧರಿಸದೇ ಗುಂಪು ಗುಂಪಾಗಿ ಮದುವೆ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವುದು ಕಂಡು ಬಂದಿದ್ದು, ಕೊರೋನಾ ಹರಡುವ ಆತಂಕ ಸೃಷ್ಟಿಯಾಗಿದೆ.
ರಾಜ್ಯ ಕೊರೋನಾದಿಂದ ತತ್ತರಿಸಿ ನಡುಗುತ್ತಿದ್ದರೂ ಇದ್ಯಾವುದೂ ಕ್ಯಾರೇ ಅಲ್ಲ ಎಂಬಂತೆ ವರ್ತಿಸುತ್ತಿರುವ ಜಿಲ್ಲಾ ಪಂಚಾಯತ್ ಸದಸ್ಯ ತುಂಗಪ್ಪ ಬಂಗೇರರ ವಿರುದ್ಧ ಭಾರೀ ಆಕ್ರೋಶಗಳು ಕೇಳಿಬರುತ್ತಿದೆ.
ಕೋವಿಡ್ ನಿಯಮಗಳನ್ನು ಪಾಲಿಸದೆ ಇಷ್ಟೊಂದು ಜನರನ್ನು ಸೇರಿಸಿ ಕಾರ್ಯಕ್ರಮ ನಡೆಸುವ ಉದ್ದೇಶವಾದರೂ ಏನು? ಮಂದಿರ, ಚರ್ಚ್, ಮಸೀದಿಗಳಿಗೆ ಇರುವ ಕೋವಿಡ್ ನಿಯಮಾವಳಿ ಇಂತಹ ಕಾರ್ಯಕ್ರಮಕ್ಕೆ ಇಲ್ಲವೇ? ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಎದುರಿನಲ್ಲೆ ನಡೆಯುವ ಈ ಕಾರ್ಯಕ್ರಮಕ್ಕೆ ಅನುಮತಿ ನೀಡಿದವರು ಯಾರು?
ಲಾಕ್ ಡೌನ್, ಕರ್ಫ್ಯೂ ನಿಯಮ ಉಲ್ಲಂಘನೆ ಎಂದು ಬಡ ವ್ಯಾಪಾರಿಗಳ ಮೇಲೆ ದಾಖಲಾಗುವ ಕೇಸು ಇಲ್ಲಿನ ಸಂಘಟಕರ ಮೇಲೂ ದಾಖಲಾಗುವುದೇ? ಎಂಬುದು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿರುವ ಪ್ರಶ್ನೆ.