ಬೆಂಗಳೂರು: ಮಂಗಳೂರಿನ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಣದಲ್ಲಿ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಲು ಬೆಂಗಳೂರಿನ ವಕೀಲ ಎಸ್ ಬಾಲಕೃಷ್ಣನ್ ಅವರನ್ನು ಈಚೆಗೆ ಸರ್ಕಾರವು ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ನೇಮಕ ಮಾಡಿದೆ.
ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ ಸೆಕ್ಷನ್ 24, ಉಪ ಸೆಕ್ಷನ್ 8ರ ಅಡಿ ಬಾಲಕೃಷ್ಣನ್ ಅವರನ್ನು ನೇಮಕ ಮಾಡಲಾಗಿದೆ. ವಿನಾಯಕ ಬಾಳಿಗಾ ಸಹೋದರಿ ಅನುರಾಧಾ ಅವರ ಕೋರಿಕೆಯಂತೆ ನೇಮಕ ಮಾಡಲಾಗಿದೆ. ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್ ವಿ ಕಾಂತರಾಜು ಅವರು ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.
ನವೆಂಬರ್ 7ರಂದು ಪ್ರಕರಣ ವಿಚಾರಣೆಗೆ ಬರಲಿದ್ದು, ಅಂದು ವಿಚಾರಣೆಯ ದಿನಾಂಕ ನಿಗದಿಯಾಗುವ ಸಾಧ್ಯತೆ ಇದೆ ಎಂದು ಎಸ್‌ಪಿಪಿ ಬಾಲಕೃಷ್ಣನ್ ಅವರು “ಬಾರ್ ಅಂಡ್ ಬೆಂಚ್”ಗೆ ತಿಳಿಸಿದರು.
2016 ಮಾರ್ಚ್ 21ರಂದು ಮಂಗಳೂರಿನ ವೆಂಕಟರಮಣ ದೇವಸ್ಥಾನದ ಸಮೀಪ ವಿನಾಯಕ ಬಾಳಿಗಾ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಕುರಿತು ಅನುರಾಧಾ ಬಾಳಿಗಾ ನೀಡಿದ ದೂರಿನ ಅನ್ವಯ ಬಾರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಯುವ ಬ್ರಿಗೇಡ್ ಮುಖಂಡನಾದ ನರೇಶ್ ಶೆಣೈ, ಶ್ರೀಕಾಂತ್, ಶಿವಪ್ರಸಾದ್ ಅಲಿಯಾಸ್ ಶಿವ ಅಲಿಯಾಸ್ ಶಿವಪ್ರಸನ್ನ, ವಿನೀತ್ ಪೂಜಾರಿ, ನಿಶ್ಚಿತ್ ದೇವಾಡಿಗ, ಶೈಲೇಶ್ ಅಲಿಯಾಸ್ ಶೈಲು ಮತ್ತು ಮಂಜುನಾಥ್ ಶೆಣೈ ಅಲಿಯಾಸ್ ಮಂಜು ಅವರು ಆರೋಪಿಗಳಾಗಿದ್ದಾರೆ. ಇವರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 143, 144, 147, 120 (ಬಿ), 302, 212, 201, 149 ಮತ್ತು ಶಸ್ತ್ರಾಸ್ತ್ರ ಕಾಯಿದೆ ಸೆಕ್ಷನ್‌ಗಳಾದ 5(1)ಎ, 25(1)(ಎ), 27(1) ಅಡಿ ಪ್ರಕರಣ ದಾಖಲಿಸಲಾಗಿದೆ. ನರೇಶ್ ಶೆಣೈ ಕೊಲೆಗೆ ಸುಪಾರಿ ನೀಡಿದ್ದರು ಎಂದು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಪ್ರಕರಣದಲ್ಲೂ ವಕೀಲರಾದ ಎಸ್ ಬಾಲಕೃಷ್ಣನ್ ಅವರು ವಿಶೇಷ ಸರ್ಕಾರಿ ಅಭಿಯೋಜಕರಾಗಿದ್ದಾರೆ ಎಂಬುದನ್ನು ಇಲ್ಲಿ ನೆನೆಯಬಹುದಾಗಿದೆ.
(ಕೃಪೆ: ಬಾರ್ & ಬೆಂಚ್)