ದಾವಣಗೆರೆ: ಇಲ್ಲಿನ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ವಿನಯ್ ಕುಮಾರ್‌ಗೆ ನನ್ನ ಬೆಂಬಲ ಇಲ್ಲ. ಈತನನ್ನು ಸೋಲಿಸಿ ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ದಾವಣಗೆರೆಯಲ್ಲಿ ನಡೆದ ಪ್ರಜಾಧ್ವನಿ ಜನಸಮಾವೇಶದಲ್ಲಿ ಮಾತನಾಡಿದ ಸಿಎಂ, ವಿನಯ್ ಕುಮಾರ್ ಕಾಂಗ್ರೆಸ್ಸಿಗೆ ಬಂದು ಕೇವಲ ಆರು ತಿಂಗಳಾಗಿದೆ. ಶಾಮನೂರು ಶಿವಶಂಕರಪ್ಪ ಮತ್ತು ಮಲ್ಲಿಕಾರ್ಜುನ್ ಕುಟುಂಬ ಆರಂಭದಿಂದಲೂ ಹತ್ತಾರು ವರ್ಷಗಳಿಂದ ಕಾಂಗ್ರೆಸ್ಸಿನಲ್ಲಿದೆ. ಪ್ರಭಾ ಮಲ್ಲಿಕಾರ್ಜುನ್ ಅತ್ಯಂತ ಉತ್ತಮ ಅಭ್ಯರ್ಥಿ. ಇವರನ್ನು ಗೆಲ್ಲಿಸಿದರೆ ನಾನೇ ಗೆದ್ದ ಹಾಗೆ ಎಂದು ಹೇಳಿದ್ದಾರೆ.
ಪಕ್ಷೇತರನಾಗಿ ಸ್ಪರ್ಧಿಸುವುದಿಲ್ಲ ಎಂದು ನನ್ನ ಮತ್ತು ಕನಕಗುರುಪೀಠದ ಶ್ರೀ ನಿರಂಜನಾನಂದಪುರಿ ಶ್ರೀಗಳ ಎದುರು ಒಪ್ಪಿಕೊಂಡು ಹೋಗಿದ್ದ ವಿನಯ್ ಆಮೇಲೆ ಉಲ್ಟಾ ಹೊಡೆದು ನಮ್ಮಿಬ್ಬರಿಗೂ ಮಾತು ತಪ್ಪಿದ್ದಾನೆ. ಈತನಿಗೆ ಬಿಜೆಪಿ ಕುಮ್ಮಕ್ಕು ಕೊಡುತ್ತಿದೆ. ಏಕೆಂದರೆ ಈತನ ಸ್ಪರ್ಧೆಯಿಂದ ಲಾಭ ಆಗುವುದು ಬಿಜೆಪಿಗೆ. ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಗೆದ್ದರೆ ಮುಖ್ಯಮಂತ್ರಿಯಾಗಿ ನನಗಿನ್ನೂ ಹೆಚ್ಚಿನ ಶಕ್ತಿ ಬರುತ್ತದೆ ಎಂದು ವಿನಯ್ ಕುಮಾರ್ ನನ್ನು ಸೋಲಿಸಲು ಸಿಎಂ ಕರೆ ನೀಡಿದರು.
ಬೆಲೆ ಏರಿಕೆಗೆ ಬ್ರೇಕ್ ಹಾಕುವುದಾಗಿ ಭಾರತೀಯರನ್ನು ನಂಬಿಸಿ ಓಟು ತಗೊಂಡ್ರು. ಈಗ ಡೀಸೆಲ್, ಪೆಟ್ರೋಲ್, ಗ್ಯಾಸ್, ರಸಗೊಬ್ಬರ, ಬೇಳೆ, ಕಾಳು, ಅಡುಗೆ ಎಣ್ಣೆ ಸೇರಿ ಎಲ್ಲದರ ಬೆಲೆಯೂ ಆಕಾಶ ಮುಟ್ಟಿತು. ಹೀಗೆ ನಿರಂತರವಾಗಿ ಭಾರತೀಯರಿಗೆ ದ್ರೋಹ ಬಗೆಯುತ್ತಲೇ ಇದ್ದಾರೆ. ನಿಮ್ಮ ಪ್ರತಿಯೊಂದು ಓಟಿಗೂ ದ್ರೋಹ ಬಗೆದಿದ್ದಾರೆ. ಇದೇ ದ್ರೋಹಿಗಳಿಂದ ಮತ್ತೆ ಮತ್ತೆ ಮೋಸ ಹೋಗಬೇಡಿ ಎಂದು ಕರೆ ನೀಡಿದರು.