ಬಿಜೆಪಿ ಸೇರಲು ವಿಜಯೇಂದ್ರ ನನಗೆ ದುಡ್ಡಿನ ಆಮಿಷವನ್ನಿಟ್ಟಿದ್ದ: ಎಚ್. ವಿಶ್ವನಾಥ್ ಆರೋಪ

Prasthutha|

ಮೈಸೂರು: ‘ನನ್ನನ್ನು ಬಿಜೆಪಿಗೆ ಆಹ್ವಾನಿಸಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ನನಗೆ ದುಡ್ಡು ಕೊಡಲು ಬಂದಿದ್ದರು. ಅವರ ಅಪಾರ್ಟ್ಮೆಂಟ್’ನಲ್ಲೇ ಮಾತುಕತೆ ನಡೆದಿತ್ತು’ ಎಂದು ವಿಧಾನಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ಮತ್ತೊಂದು ಸ್ಫೋಟಕ ಮಾಹಿತಿಯನ್ನು ಹೊರಗೆಡವಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನನ್ನು ಬಿಜೆಪಿ ಹೆಬ್ಬಾಗಿಲಿಗೆ ಕರೆದುಕೊಂಡು ಬಂದು ಕಡಿದವರೇ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು. ವಿಜಯೇಂದ್ರನ ಮನೆಯಲ್ಲಿ ಮಾತುಕತೆ ನಡೆದಿತ್ತು. ಬಿ.ಎಸ್.ಯಡಿಯೂರಪ್ಪ, ರಮೇಶ ಜಾರಕಿಹೊಳಿ, ವಿಜಯೇಂದ್ರ ಆ ಸಂದರ್ಭದಲ್ಲಿ ಇದ್ದರು. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವುದಕ್ಕಾಗಿ ನೀವು ಬಿಜೆಪಿಗೆ ಬರಬೇಕು ಎಂದು ನನ್ನನ್ನು ಕರೆದಿದ್ದರು. ಆ ಸ್ನೇಹಕ್ಕೆ ಕಟ್ಟುಬಿದ್ದು ಪಕ್ಷಕ್ಕೆ ಬಂದೆ. ಆದರೆ ಶ್ರೀನಿವಾಸಪ್ರಸಾದ್ ಹಾಗೂ ಯಡಿಯೂರಪ್ಪ ನನ್ನ ಕೈಬಿಟ್ಟರು. ನಾನು ಸಚಿವನಾಗಲು ಯಾರೂ ಸಹಕಾರ ಕೊಡಲಿಲ್ಲ. ವಿಧಾನಪರಿಷತ್ ಸದಸ್ಯ ಸ್ಥಾನ ಸಿಗುವುದಕ್ಕೂ ಅವರಾರೂ ಕಾರಣವಾಗಲಿಲ್ಲ. ಸಹಾಯವನ್ನೂ ಮಾಡಲಿಲ್ಲ. ನನ್ನನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿದವರು ಆರ್ಎಸ್ಎಸ್ ರಾಜ್ಯ ಪ್ರಮುಖ ಮುಕುಂದ. ಅವರಿಲ್ಲದಿದ್ದರೆ ನನಗೆ ಮೋಸವಾಗುತ್ತಿತ್ತು ಎಂದು ಹೇಳಿದರು.

- Advertisement -


‘ಶೀಘ್ರದಲ್ಲೇ ಹೊರಬರಲಿರುವ ನನ್ನ ‘ಬಾಂಬೆ ಡೇಸ್’ ಪುಸ್ತಕದ ಮೊದಲ ಅಧ್ಯಾಯದಲ್ಲೇ ಇವೆಲ್ಲಾ ಅಂಶಗಳ ವಿವರಗಳು ಇರಲಿವೆ’ ಎಂದು ತಿಳಿಸಿದರು.


‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಸೌಹಾರ್ದದಿಂದ ಭೇಟಿಯಾಗಿದ್ದೇನಷ್ಟೆ. ಅದೇನು ಘೋರ ಅಪರಾಧವೇ? ರಾಜಕೀಯ ಸಹಿಷ್ಣುತೆ ಯಾಕಿರಬಾರದು? ನಾನೀಗ ಸಂಪೂರ್ಣವಾಗಿ, ಮಾನಸಿಕವಾಗಿ ಬಿಜೆಪಿಯಲ್ಲಿದ್ದೇನೆ. ಚುನಾವಣೆಯ ಯೋಚನೆಯಲ್ಲಿಲ್ಲ. ನಾನು ಅವಕಾಶವಾದಿ ರಾಜಕಾರಣಿಯಲ್ಲ’ ಎಂದು ಹೇಳಿದರು.



Join Whatsapp