◾ “ಪಕ್ಷದಲ್ಲಿ ಆತನನ್ನು ಯಾರೂ ಒಪ್ಪಿಲ್ಲ”
ಬೆಳಗಾವಿ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಗಂಭೀರ ಆರೋಪ ಹೊರಿಸಿ ಟೀಕೆಯ ಸುರಿಮಳೆಗೈದಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬೊಮ್ಮಾಯಿ ಸೇರಿದಂತೆ ಹಲವು ಹಿರಿಯ ನಾಯಕರಿಗೆ ವಿಜಯೇಂದ್ರ ಕಾಟ ಕೊಟ್ಟಿದ್ದಾನೆ. ಹಲವು ಹಿರಿಯ ನಾಯಕರನ್ನು ಸೋಲಿಸಲು ವಿಜಯೇಂದ್ರ ಹುನ್ನಾರ ನಡೆದಿದ್ದನು ಎಂದು ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.
ಉತ್ತರ ಕರ್ನಾಟಕ ಭಾಗದ ನಾಯಕರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕ ಸ್ಥಾನ ಸಿಗುವವರೆಗೂ ನಾನು ಸಭೆಯಲ್ಲಿ ಪಾಲ್ಗೊಳ್ಳಲ್ಲ ಎಂದು ಮತ್ತೊಮ್ಮೆ ಹೇಳಿದ್ದಾರೆ.
ಬ್ಲಾಕ್ಮೇಲ್ ಮಾಡುವ ಮೂಲಕ ವಿಜಯೇಂದ್ರ ಅಧ್ಯಕ್ಷನಾಗಿದ್ದಾನೆ, ನಮ್ಮ ಪಕ್ಷದಲ್ಲಿ ಆತನನ್ನು ಯಾರೂ ಒಪ್ಪಿಲ್ಲ. ನಾವೆಲ್ಲಾ ಏನು ಅವನ ಗುಲಾಮರಾ? ಮೇಲಿನ ನಾಯಕರು ಯಾಕೆ ಹೆದರಿಕೊಂಡರು ಗೊತ್ತಿಲ್ಲ. ಸಿದ್ದರಾಮಯ್ಯಗೆ ಆತ ಬೆಂಬಲ ನೀಡಿದ್ದಾನೆ, ಕನಕಪುರದಲ್ಲಿ ಬಿಜೆಪಿ ಡೆಪಾಸಿಟ್ ಕಳೆದುಕೊಂಡಿತು. ಬೊಮ್ಮಾಯಿಯವರನ್ನು ಸೋಲಿಸಲು ವಿಜಯೇಂದ್ರ ಹಣ ನೀಡಿದ್ದಾನೆ. ಲಿಂಗಾಯತರನ್ನು ಕಳಿಸಿ ಸೋಮಣ್ಣರನ್ನು ಕೂಡ ಸೋಲಿಸಿದ್ದಾನೆ ಎಂದು ಯತ್ನಾಳ್ ತನ್ನ ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ್ದಾರೆ.
ಬಿ.ಎಸ್. ಯಡಿಯೂರಪ್ಪ ವಿರುದ್ಧ ಆರೋಪಗಳ ಸರಣಿಯನ್ನು ಮುಂದುವರೆಸಿರುವ ಯತ್ನಾಳ್, ಬಿಎಸ್ವೈ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಜೊತೆ ಅಡ್ಜಸ್ಟ್ಮೆಂಟ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಮತ್ತೊಂದು ಆರೋಪ ಮಾಡಿದ್ದಾರೆ.