ವಿಜಯಪುರ: ಜಿಲ್ಲೆಯಲ್ಲಿ 2017ರಲ್ಲಿ ನಡೆದಿದ್ದ ಗರ್ಭಿಣಿಯ ಮರ್ಯಾದಾ ಹತ್ಯೆ ಪ್ರಕರಣದಲ್ಲಿ ವಿಜಯಪುರ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಬ್ಬರಿಗೆ ಗಲ್ಲು ಶಿಕ್ಷೆ ವಿಧಿಸಿದೆ. ಜೊತೆಗೆ ಐವರಿಗೆ ಜೀವಾವಧಿ ಶಿಕ್ಷೆಯನ್ನೂ ವಿಧಿಸಿ ತೀರ್ಪು ನೀಡಿದೆ.
2017 ಜೂನ್ 3ರಂದು ಭಾನು ಅತ್ತಾರ ಎಂಬ 9 ತಿಂಗಳ ಗರ್ಭಿಣಿಗೆ ಬೆಂಕಿ ಹಚ್ಚಿ ಭೀಕರವಾಗಿ ಹತ್ಯೆ ಮಾಡಿದ ಘಟನೆ ಮುದ್ದೇಬಿಹಾಳ ತಾಲೂಕಿನ ಗುಂಡಕನಾಳ ಗ್ರಾಮದಲ್ಲಿ ನಡೆದಿತ್ತು.
ಭಾನು ಅತ್ತಾರ ಯುವತಿಯನ್ನು ಅದೇ ಗ್ರಾಮದ ಸಾಯಬಣ್ಣ ಉರ್ಫ್ ಮುದುಕಪ್ಪ ಶರಣಪ್ಪ ಕೊಣ್ಣೂರು ಎಂಬ ಯುವಕ ಮದುವೆಯಾಗಿದ್ದ. ಅನ್ಯಧರ್ಮದ ಯುವಕನನ್ನು ತಮ್ಮ ಮಗಳು ಮದುವೆಯಾಗಿ ಕುಟುಂಬದ ಮಾನ ತೆಗೆದಿದ್ದಾಳೆ ಎಂಬ ಕೋಪದಲ್ಲಿ ಭಾನು 9 ತಿಂಗಳ ಗರ್ಭೀಣಿಯಾಗಿದ್ದರೂ ಬೆಂಕಿ ಹಚ್ಚಿ ಹತ್ಯೆ ಮಾಡಲಾಗಿತ್ತು. ಹೆತ್ತವರು, ಸಹೋದರರು ಹಾಗೂ ಬಂಧುಗಳೇ ಹತ್ಯೆಗೈದಿದ್ದರು.
ತನ್ನ ಪತ್ನಿಯ ಭೀಕರ ಹತ್ಯೆ ಕುರಿತು ಸಾಯಬಣ್ಣ ತಾಳಿಕೋಟೆ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಪ್ರಕರಣದ ಕುರಿತು ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ಧ ಬಸವನಬಾಗೇವಾಡಿ ಡಿಎಸ್ಪಿ ಪಿ.ಕೆ.ಪಾಟೀಲ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.