ವಿಜಯ್ ಮರ್ಚಂಟ್ ಟ್ರೋಫಿ | ಮಧ್ಯಪ್ರದೇಶ ವಿರುದ್ಧ ಆರು ರನ್’ಗಳಿಗೆ ಆಲೌಟ್ ಆದ ಸಿಕ್ಕಿಂ !

Prasthutha|

ಸೂರತ್: ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಶ್ ಲೀಗ್ ಟಿ20 ಟೂರ್ನಿಯಲ್ಲಿ ಕಳೆದ ವಾರ ನಡೆದ ಅಡಿಲೇಡ್ ಸ್ಟ್ರೈಕರ್ಸ್ ವಿರುದ್ಧದ ಪಂದ್ಯದಲ್ಲಿ ಸಿಡ್ನಿ ಥಂಡರ್ ತಂಡ ಕೇವಲ 15 ರನ್’ಗಳಿಗೆ ಆಲೌಟ್ ಆಗುವ ಮೂಲಕ ದಾಖಲೆ ನಿರ್ಮಾಣವಾಗಿತ್ತು.

- Advertisement -

ಇದೀಗ ಭಾರತದ ದೇಶಿಯ ಟೂರ್ನಿಯಲ್ಲೂ ತಂಡವೊಂದು ಕೇವಲ ಆರು ರನ್’ಗಳಿಗೆ ಆಲೌಟ್ ಆಗುವ ಮೂಲಕ, ಬರೋಬ್ಬರಿ 212 ವರ್ಷಗಳ ಅತ್ಯಪರೂಪದ ದಾಖಲೆಯೊಂದು ಪತನವಾಗಿದೆ. 

ಸೂರತ್’ನ ಖೋಲ್ವಾಡ್ ಜಿಮ್ಖಾನಾ ಮೈದಾನದಲ್ಲಿ ನಡೆದ ವಿಜಯ್ ಮರ್ಚಂಟ್ ಟ್ರೋಫಿ ಅಂಡರ್ 16 ಪಂದ್ಯದಲ್ಲಿ ಮಧ್ಯಪ್ರದೇಶ ಮತ್ತು ಸಿಕ್ಕಿಂ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಮಧ್ಯಪ್ರದೇಶ, ಮೊದಲ ಇನಿಂಗ್ಸ್’ನಲ್ಲಿ 8 ವಿಕೆಟ್ ನಷ್ಟದಲ್ಲಿ 414 ರನ್’ಗಳಿಗೆ ಡಿಕ್ಲೇರ್ ಮಾಡಿಕೊಂಡಿತು. ಚೇಸಿಂಗ್ ಆರಂಭಿಸಿದ ಸಿಕ್ಕಿಂ, ಮೊದಲ ಇನ್ನಿಂಗ್ಸ್’ನಲ್ಲಿ ಕೇವಲ 43 ರನ್’ಗಳಿಗೆ ಕುಸಿಯಿತು. ಫಾಲೋಅನ್ ಪಡೆದು ಮತ್ತೊಮ್ಮೆ ಬ್ಯಾಟಿಂಗ್ ನಡೆಸಿದ ಸಿಕ್ಕಿಂ ಯಾರೂ ಉಹಿಸದ ರೀತಿಯಲ್ಲಿ, ದ್ವಿತೀಯ ಇನ್ನಿಂಗ್ಸ್’ನಲ್ಲಿ 9. 3 ಓವರ್’ಗಳಲ್ಲಿ ಕೇವಲ 6 ರನ್’ಗಳಿಸುವಷ್ಟರಲ್ಲೇ ಸರ್ವಪತನ ಕಂಡಿತು. ಆ ಮೂಲಕ ಪಂದ್ಯದಲ್ಲಿ, ಮಧ್ಯಪ್ರದೇಶ ತಂಡ ಇನಿಂಗ್ಸ್ ಮತ್ತು 365 ರನ್’ಗಳ ಬೃಹತ್ ಅಂತರದಿಂದ ಜಯ ಸಾಧಿಸಿತು.                                                                                                                 ಮಧ್ಯಪ್ರದೇಶ ಪರ ಗಿರಿರಾಜ್ ಶರ್ಮಾ 5 ಓವರ್’ಗಳಲ್ಲಿ ಕೇವಲ  1 ರನ್ ನೀಡಿ 5  ವಿಕೆಟ್ ಪಡೆದರೆ, ಅಲಿಫ್ ಹಸನ್ 4.3 ಓವರ್ಗಳ ದಾಳಿಯಲ್ಲಿ  5 ರನ್ ನೀಡಿ 4 ವಿಕೆಟ್ ಪಡೆದರು. ಸಿಕ್ಕಿಂನ 9 ಬ್ಯಾಟರ್’ಗಳು ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ ಸೇರಿಕೊಂಡರು. ಸಿಕ್ಕಿಂ ಪರ ಆರಂಭಿಕ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಅವನೀಶ್ ಏಕೈಕ ಬೌಂಡರಿ ಬಾರಿಸಿದರೆ, ಅಕ್ಷಯ್ ಉಳಿದ ಎರಡು ರನ್ ಗಳಿಸಿದರು.

- Advertisement -

1810ರ ಜೂನ್ 12ರಂದು ಲಾರ್ಡ್ಸ್’ನಲ್ಲಿ, ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ದಿ ಬಿಎಸ್ ತಂಡವು  6 ರನ್ಗಳಿಗೆ ಆಲೌಟ್ ಆಗುವ ಮೂಲಕ ದಾಖಲೆ ನಿರ್ಮಿಸಿತ್ತು.

Join Whatsapp