14 ವರ್ಷಗಳ ಬಳಿಕ ಸೌರಾಷ್ಟ್ರ ತಂಡ, ವಿಜಯ್ ಹಝಾರೆ ಟ್ರೋಫಿ ಟೂರ್ನಿಯ ಚಾಂಪಿಯನ್ ಪಟ್ಟಕ್ಕೇರಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ 5 ವಿಕೆಟ್ ಅಂತರದಲ್ಲಿ ಮಹಾರಾಷ್ಟ್ರ ತಂಡವವನ್ನು ಮಣಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಮಹಾರಾಷ್ಟ್ರ ಗಳಿಸಿದ್ದು 9 ವಿಕೆಟ್ ನಷ್ಟದಲ್ಲಿ 248 ರನ್. ಸಾಮಾನ್ಯ ಗುರಿಯನ್ನು ಬೆಂಬತ್ತಲು ಸೌರಾಷ್ಟ್ರ ತೆಗೆದುಕೊಂಡಿದ್ದು 46.3 ಓವರ್.
ಮಹಾರಾಷ್ಟ್ರ ನಾಯಕ ಋತುರಾಜ್ ಗಾಯಕ್ವಾಡ್ ಮತ್ತೊಮ್ಮೆ ಶತಕದ ಆರಂಭ ಒದಗಿಸಿದರಾದರೂ, ಉಳಿದ ಬ್ಯಾಟರ್‌ಗಳು ಸಾಥ್ ನೀಡಲಿಲ್ಲ. ಅಝೀಂ ಕಾಝಿ 37 ಮತ್ತು ನೌಶಾದ್ ಶೇಖ್ 31 ರನ್‌ಗಳಿಸಿದರು. ಅತ್ತ ಸೌರಾಷ್ಟ್ರದ ಪರ ಚಿರಾಗ್ ಜಾನಿ 3 ವಿಕೆಟ್ ಪಡೆದರೆ, ಉಳಿದ ಮೂವರು ಬೌಲರ್‌ಗಳು ತಲಾ 1 ವಿಕೆಟ್ ಹಂಚಿಕೊಂಡರು.
ಚೇಸಿಂಗ್ ವೇಳೆ ಆರಂಭಿಕರಾದ ಶೆಲ್ಡನ್ ಜಾಕ್ಸನ್ (133*) ಮತ್ತು ಹರ್ವಿಕ್ ದೇಸಾಯ್ (50 ) ಬಹುತೇಕ ಕರ್ತವ್ಯವನ್ನು ಪೂರ್ತಿಗೊಳಿಸಿದರು. 136 ಎಸೆತಗಳನ್ನು ಎದುರಿಸಿದ ಜಾಕ್ಸನ್, 12 ಬೌಂಡರಿ ಮತ್ತು 5 ಸಿಕ್ಸರ್‌ಗಳ ನೆರವಿನೊಂದಿಗೆ ಅಜೇಯ 133 ರನ್‌ಗಳಿಸಿದರೆ, ದೇಸಾಯ್ 50 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. 5 ವಿಕೆಟ್ ನಷ್ಟದಲ್ಲಿ ಇನ್ನೂ 21 ಎಸೆತಗಳನ್ನು ಬಾಕಿ ಇರಿಸಿ ಗೆಲುವಿನ ಪತಾಕೆ ಹಾರಿಸಿದ ಸೌರಾಷ್ಟ್ರ, 2007-8ರ ಬಳಿಕ ಇದೇ ಮೊದಲ ಬಾರಿಗೆ ಮತ್ತು ಒಟ್ಟಾರೆಯಾಗಿ 2ನೇ ಬಾರಿಗೆ ವಿಜಯ್ ಹಝಾರೆ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.