ವಿಜಯ್‌ ಹಝಾರೆ ಟ್ರೋಫಿ; ಸೆಮಿಫೈನಲ್ ಪ್ರವೇಶಿಸಿದ ಕರ್ನಾಟಕ

Prasthutha|

ಆರಂಭಿಕ ಆರ್‌. ಸಮರ್ಥ್‌ ಮತ್ತು ಮಧ್ಯಮ ಕ್ರಮಾಂಕದಲ್ಲಿ ಮನೀಶ್‌ ಪಾಂಡೆ, ಶ್ರೇಯಸ್‌ ಗೋಪಾಲ್‌ ತೋರಿದ ದಿಟ್ಟ ಬ್ಯಾಟಿಂಗ್‌ ಪ್ರದರ್ಶನದ ನೆರವಿನಿಂದ ಕರ್ನಾಟಕ ತಂಡವು, ವಿಜಯ್‌ ಹಝಾರೆ ಟ್ರೋಫಿ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಪಂಜಾಬ್‌ ತಂಡವನ್ನು 4 ವಿಕೆಟ್‌ ಅಂತರದಲ್ಲಿ ರೋಚಕವಾಗಿ ಮಣಿಸಿದೆ.

- Advertisement -

ಅಹಮದಾಬಾದ್‌ನಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಪಂಜಾಬ್‌, 235 ರನ್‌ಗಳಿಗೆ ಆಲೌಟ್‌ ಆಗಿತ್ತು. ಬಿಗು ಬೌಲಿಂಗ್‌ ದಾಳಿ ಸಂಘಟಿಸಿದ್ದ ವಿದ್ವತ್‌ ಕಾವೇರಪ್ಪ, 40 ರನ್‌ ನೀಡಿ 4 ವಿಕೆಟ್‌ ಪಡೆದರು. ಸುಲಭ ಗುರಿ ಪಡೆದಿದ್ದರೂ ಗೆಲುವಿಗಾಗಿ ಕರ್ನಾಟಕ 50ನೇ ಓವರ್‌ವರೆಗೂ ಹೋರಾಟ ಪ್ರದರ್ಶಿಸಬೇಕಾಯಿತು. ಇನ್ನಿಂಗ್ಸ್‌ ಆರಂಭಿಸಿದ್ದ ನಾಯಕ ಮಯಾಂಕ್‌ ಅಗರ್ವಾಲ್‌ ಕೇವಲ 1 ರನ್‌ಗಳಿಸಿ ವಿಕೆಟ್‌ ಒಪ್ಪಿಸಿದ್ದರು.

ನಿಕಿನ್‌ ಜೋಸ್‌ 29, ಮನೀಶ್‌ ಪಾಂಡೆ 35 ಹಾಗೂ , ಶ್ರೇಯಸ್‌ ಗೋಪಾಲ್‌ 42 ರನ್‌ಗಳಿಸಿದರು. ಮತ್ತೊಂದೆಡೆ ತಾಳ್ಮೆಯ ಇನ್ನಿಂಗ್ಸ್‌ ಆಡಿದ ಆರಂಭಿಕ ಆರ್‌. ಸಮರ್ಥ್‌ 106 ಎಸೆತಗಳನ್ನು ಎದುರಿಸಿ5 ಬೌಂಡರಿಗಳನ್ನೊಳಗೊಂಡ 71 ರನ್‌ಗಳಿಸಿದರು. ಅಂತಿಮವಾಗಿ ಕರ್ನಾಟಕ 49.2 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟದಲ್ಲಿ 238 ರನ್‌ಗಳಿಸುವ ಮೂಲಕ ಸೆಮಿಫೈನಲ್‌ ಪ್ರವೇಶಿಸಿತು.

- Advertisement -

ಬುಧವಾರ ಇದೇ ಮೈದಾನದಲ್ಲಿ ನಡೆಯಲಿರುವ ಸೆಮಿಫೈನಲ್‌ ಪಂದ್ಯದಲ್ಲಿ ಕರ್ನಾಟಕ ತಂಡ, ಸೌರಾಷ್ಟ್ರ ಸವಾಲನ್ನು ಎದುರಿಸಲಿದೆ.

ಸೋಮವಾರ ನಡೆದ ವಿಜಯ್‌ ಹಝಾರೆ ಟ್ರೋಫಿ ಟೂರ್ನಿಯ ಉಳಿದ ಮೂರು ಕ್ವಾರ್ಟರ್‌ ಫೈನಲ್‌ ಪಂದ್ಯಗಳ ಫಲಿತಾಂಶವನ್ನು ನೋಡುವುದಾದರೆ

ಮಹಾರಾಷ್ಟ್ರ 330/5

ಉತ್ತರ ಪ್ರದೇಶ 272 ಅಲೌಟ್‌ ( 47.4 ಓವರ್‌)

ಫಲಿತಾಂಶ: ಮಹಾರಾಷ್ಟ್ರ ತಂಡಕ್ಕೆ 58 ರನ್‌ಗಳ ಜಯ

ಸೌರಾಷ್ಟ್ರ 293/8

ತಮಿಳುನಾಡು 249 ಆಲೌಟ್‌ (48 ಓವರ್)‌

ಫಲಿತಾಂಶ: ಸೌರಾಷ್ಟ್ರ ತಂಡಕ್ಕೆ 44 ರನ್‌ಗಳ ಜಯ


ಜಮ್ಮು ಕಾಶ್ಮೀರ 350/7

ಅಸ್ಸಾಂ 354/3

ಫಲಿತಾಂಶ: ಅಸ್ಸಾಂ ತಂಡಕ್ಕೆ 7 ವಿಕೆಟ್‌ ಜಯ



Join Whatsapp