ವಾಷಿಂಗ್ಟನ್ : ಅಮೆರಿಕದ ನೂತನ ಉಪಾಧ್ಯಕ್ಷೆಯಾಗಿ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅಧಿಕಾರ ವಹಿಸಿಕೊಂಡಿದ್ದಾರೆ. ಆ ಮೂಲಕ ಹಲವು ದಾಖಲೆಗಳನ್ನು ಅವರು ನಿರ್ಮಿಸಿದ್ದಾರೆ. ಅಮೆರಿಕದ ಎರಡು ಶತಮಾನಗಳ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿ ಮಹಿಳಾ ಸೆನೆಟರ್ ಒಬ್ಬರು ಉಪಾಧ್ಯಕ್ಷೆಯಾಗಿದ್ದಾರೆ.
ಅಲ್ಲದೆ, ಕಮಲಾ ಕಪ್ಪು ವರ್ಣೀಯರಾಗಿದ್ದು, ದಕ್ಷಿಣ ಏಷ್ಯಾ ಮೂಲದ ಅಮೆರಿಕನ್ನರಲ್ಲಿ ಈ ಹುದ್ದೆಗೇರಿದ ಮೊದಲ ಪ್ರಜೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಸ್ಥಳೀಯ ಹೈಕೋರ್ಟ್ ನಲ್ಲಿ ವಕೀಲೆಯಾಗಿರುವ ಕಮಲಾ ಹ್ಯಾರಿಸ್, ಈ ಹುದ್ದೆಗೆ ನಾಮ ನಿರ್ದೇಶನಗೊಂಡಾಗಲೂ ಸ್ಪರ್ಧೆಯಿಂದ ಹಿಂದೆ ಸರಿಯಲು ಮುಂದಾಗಿದ್ದರು. ಆದರೆ, ಅಮೆರಿಕದ ಹಾಲಿ ಅಧ್ಯಕ್ಷ ಹಾಗೂ ಡೊನಾಲ್ಡ್ ಟ್ರಂಪ್ ವಿರುದ್ಧ ಗೆದ್ದಿರುವ ಜೋ ಬೈಡನ್ ಸ್ಪರ್ಧೆಯಲ್ಲಿ ಮುಂದುವರೆಯುವಂತೆ ಕಮಲಾ ಹ್ಯಾರಿಸ್ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು.
ಕಮಲಾ ಹ್ಯಾರಿಸ್ ಉಪಾಧ್ಯಕ್ಷೆಯಾಗಿದ್ದರೂ, ಅಧ್ಯಕ್ಷ ಜೋ ಬೈಡನ್ ಗೆಲುವಿನ ಪ್ರಮುಖ ರೂವಾರಿಯೂ ಆಗಿದ್ದಾರೆ. ಹೀಗಾಗಿ ಮುಂದೆ ಕಮಲಾ ಹ್ಯಾರಿಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾದರೂ ಅಚ್ಚರಿಯಿಲ್ಲ.
ಕಮಲಾರ ತಾಯಿ ಶ್ಯಾಮಲಾ ಭಾರತದ ತಮಿಳುನಾಡು ಮೂಲದವರು. ಶಿಕ್ಷಣಕ್ಕಾಗಿ ಅಮೆರಿಕಕ್ಕೆ ತೆರಳಿದ್ದ ಅವರು ಅಲ್ಲೇ ಕಪ್ಪು ವರ್ಣೀಯರೊಬ್ಬರನ್ನು ಮದುವೆಯಾಗಿ ಜೀವನ ಕಟ್ಟಿಕೊಂಡಿದ್ದರು. ಕಮಲಾ ವಕೀಲೆಯಾಗಿ ಭಾರೀ ಹೆಸರು ಮಾಡಿದ್ದಾರೆ. ಜೋ ಬೈಡನ್ ಗೂ ಭಾರತದ ನಂಟಿದೆ ಎನ್ನಲಾಗುತ್ತಿದೆ. ಈ ಇಬ್ಬರೂ ಭಾರತದ ಬಗ್ಗೆ ಉತ್ತಮ ಭಾವನೆಯನ್ನು ಹೊಂದಿದ್ದು, ಹಲವು ಬಾರಿ ತಮ್ಮ ಭಾಷಣಗಳಲ್ಲಿ ಭಾರತದ ಬಗ್ಗೆ ಉಲ್ಲೇಖಿಸಿದ್ದಾರೆ. ಮುಂದೆ ಭಾರತದ ಜೊತೆಗೆ ಇವರ ಆಡಳಿತದ ನಂಟು ಹೇಗಿರುತ್ತದೆ ಎಂಬುದನ್ನು ಕಾದು ನೋಡಬೇಕು.