ನವೆಂಬರ್ 10, 11ರಂದು ವಿ.ಎಚ್.ಪಿಯಿಂದ ಸಾಧು-ಸಂತರ ಸಭೆ: ಮಥುರಾ ಶ್ರೀಕೃಷ್ಣ ಜನ್ಮಭೂಮಿ ಕುರಿತು ಚರ್ಚೆ ಸಾಧ್ಯತೆ

Prasthutha: October 28, 2020

►► ದಿಲ್ಲಿಯಲ್ಲಿ ಅಖಿಲ ಭಾರತೀಯ ಸಂತ ಪ್ರತಿನಿಧಿ ಸಭೆ

►► ಸಂತಸಮಿತಿ ಸಭೆಯೊಂದಿಗೆ ರಾಮ ಜನ್ಮಭೂಮಿ ಆಂದೋಲನ ಆರಂಭವಾಗಿತ್ತು

ಹೊಸದಿಲ್ಲಿ: ಬಾಬ್ರಿ ಮಸ್ಜಿದ್ ವಿವಾದದ ಬಳಿಕ ಇದೀಗ ಮತ್ತೊಂದು ಅಜೆಂಡಾವನ್ನು ಕೈಗೆತ್ತಿಕೊಂಡಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್)ದ ಅಂಗಸಂಘಟನೆ ವಿಶ್ವಹಿಂದೂ ಪರಿಷತ್ ನವೆಂಬರ್ 10 ರಮತ್ತು 11 ರಂದು ರಾಷ್ಟ್ರ ರಾಜಧಾನಿಯಲ್ಲಿ ದೇಶ-ವಿದೇಶಗಳ ಸುಮಾರು 200 ಮಹಂತರು ಮತ್ತು ಸಾಧುಗಳ ಸಭೆಯನ್ನು ಕರೆದಿದೆ. ಎರಡು ದಿನಗಳ ಈ ಸಭೆಯಲ್ಲಿ ಮಥುರಾದ ಶ್ರೀ ಕೃಷ್ಣ ಜನ್ಮಭೂಮಿ ವಿಷಯವನ್ನು ಚರ್ಚಿಸಲಾಗುತ್ತದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎ.ಎನ್.ಐ ವರದಿ ಮಾಡಿದೆ.

ಈ ಅಖಿಲ ಭಾರತೀಯ ಸಂತ ಪ್ರತಿನಿಧಿ ಸಭೆಯಲ್ಲಿ ಮುಂದಿನ ಮೂರು ವರ್ಷಗಳ ತನಕ ಸಾಧುಗಳು ಮತ್ತು ಸಂತರು ಇದಕ್ಕಾಗಿ ಕೆಲಸಮಾಡುವ ಅಜೆಂಡಾದ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದೆಂದು ಹೇಳಲಾಗಿದೆ.

“ಏನು ಮಾಡಬೇಕು, ಶ್ರೀಕೃಷ್ಣ ಜನ್ಮಭೂಮಿಗಾಗಿ ಯಾವಾಗ ಆಂದೋಲನವನ್ನು ಆರಂಭಿಸಬೇಕು ಎಂದು ಮಹಂತರು ಮತ್ತು ಸಾಧುಗಳು ತೀರ್ಮಾನಿಸಲಿದ್ದಾರೆ. ಸಂತಸಮಿತಿ ಸಭೆಯೊಂದಿಗೆ ಶ್ರೀರಾಮ ಜನ್ಮಭೂಮಿ ಆಂದೋಲನ ಆರಂಭವಾಗಿದ್ದು ಅದು ಬಲವನ್ನು ಪಡೆಯಿತು ಮತ್ತು ಈಗ ಮಂದಿರ ನಿರ್ಮಾಣ ಪ್ರಾರಂಭವಾಗಿರುವುದನ್ನು ನಾವು ಕಾಣಬಹುದು” ಎಂದು ಮೂಲವು ಹೇಳಿದೆಯೆನ್ನಲಾಗಿದೆ.

ಸಾಧುಗಳು ರಾಮಜನ್ಮಭೂಮಿ ಆಂದೋಲನದಲ್ಲಿ ತೊಡಗಿದ್ದರು ಮತ್ತು ಈಗ ಅದರ ನಿರ್ಮಾಣದಲ್ಲಿ ತೊಡಗಿದ್ದಾರೆ. ಅವರು ಈಗ ಮಥುರಾದ ಶ್ರೀಕೃಷ್ಣ ಜನ್ಮಸ್ಥಾನ ಮತ್ತು ಕಾಶಿಯ ವಿಶ್ವನಾಥ ದೇವಸ್ಥಾನ ವಾಸ್ತವ ರೂಪಕ್ಕೆ ಇಳಿಯುವುದನ್ನು ಕುತೂಹಲದಿಂದ ಕಾಯುತ್ತಿದ್ದಾರೆ ಎಂದು ಮೂಲವು ತಿಳಿಸಿದೆ.

“ಮಥುರಾ ಕೃಷ್ಣ ಜನ್ಮಸ್ಥಾನ ಮಂದಿರದ ಆಂದೋಲನವನ್ನು ಅಯೋಧ್ಯೆಯಲ್ಲಿ ರಾಮಮಂದಿರ ಪೂರ್ಣಗೊಳ್ಳುವುದಕ್ಕೆ ಮುಂಚೆಯೇ ಆರಂಭಿಸಬೇಕೆ ಅಥವಾ ಕಾಯಬೇಕೆ ಎಂಬ ಕುರಿತು ನಿರ್ಣಯವನ್ನು ತೆಗೆದುಕೊಳ್ಳಲಾಗುವುದು. ಆಂದೋಲನವು ಆರಂಭಗೊಳ್ಳುವ ತನಕ ಏನೆಲ್ಲಾ ಮಾಡಬೇಕು ಎಂಬ ತಂತ್ರಗಾರಿಕೆಯ ಕುರಿತು ಧಾರ್ಮಿಕ ನಾಯಕರು ಚಿಂತಿಸಲಿದ್ದಾರೆ” ಎಂದು ಮೂಲವು ಉಲ್ಲೇಖಿಸಿದೆ.

ರಾಮ ಮಂದಿರ ವಿಷಯವಲ್ಲದೆ ಮಥುರಾ ಮತ್ತು ಕಾಶಿಗಳಲ್ಲಿ ಮಂದಿರ ನಿರ್ಮಾಣ ವಿ.ಎಚ್.ಪಿಯ ಪ್ರಮುಖ ಬೇಡಿಕೆಯಾಗಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!