ನವದೆಹಲಿ: ಮಧ್ಯಪ್ರದೇಶದ ಚರ್ಚುಗಳನ್ನು ನೆಲಸಮಗೊಳಿಸುವುದಾಗಿ ಸಂಘಪರಿವಾರ ಸಂಘಟನೆಗಳಾದ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಬೆದರಿಕೆ ಹಾಕಿದೆ. ಈ ಮಧ್ಯೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ತಕ್ಷಣ ಮಧ್ಯಪ್ರವೇಶ ನಡೆಸಿ ತುರ್ತುಸ್ಥಿತಿಯನ್ನು ಸರಿಪಡಿಸುವಂತೆ ರಾಜ್ಯದ ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸಮುದಾಯ ಒತ್ತಾಯಿಸಿದೆ. ಮಾತ್ರವಲ್ಲ ಮಧ್ಯಪ್ರದೇಶದಲ್ಲಿ ಕ್ರಿಶ್ಚಿಯನ್ ಸಮುದಾಯದ ವಿರುದ್ಧ ಹಿಂಸಾತ್ಮಕ ಪ್ರವೃತ್ತಿಯನ್ನು ನಿಲ್ಲಿಸಲು ರಾಜ್ಯಪಾಲರು ಮತ್ತು ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ.
ಕ್ರಿಶ್ಚಿಯನ್ ಸಮುದಾಯದ ಭದ್ರತೆಯನ್ನು ಖಾತ್ರಿಪಡಿಸುವಂತೆ ಮತ್ತು ಕ್ರೈಸ್ತ ವಿರೋಧಿ ಕೃತ್ಯವನ್ನು ತಡೆಯುವಂತೆ ತುರ್ತು ಮಧ್ಯಸ್ಥಿಕೆ ವಹಿಸುವಂತೆ ಕೋರಿ ಜಾಬುವಾ ಎಂಬಲ್ಲಿನ ಪ್ರೊಟೆಸ್ಟೆಂಟ್ ಚರ್ಚ್ ನ ಸಹಾಯಕ ಬಿಷಪ್ ಪಾಲ್ ಮುನಿಯಾ ಜಿಲ್ಲಾಧಿಕಾರಿ ಅವರಲ್ಲಿ ಮನವಿ ಮಾಡಿದ್ದಾರೆ.
ಭೋಪಾಲ್ ಕ್ಯಾಥೋಲಿಕ್ ಅರ್ಚಡಯಾಸಿಸ್ ಸಾರ್ವಜನಿಕ ಸಂಪರ್ಕಾಧಿಕಾರಿ ಫಾದರ್ ಮರಿಯಾ ಸ್ಟೆಫನ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ ದೇಶದ ಇಡೀ ಆಡಳಿತ ವ್ಯವಸ್ಥೆ 4 % ಕ್ರಿಶ್ಚಿಯನ್ ಸಮುದಾಯವನ್ನು ಗುರಿಯಾಗಿಸಿ ಹಿಂಸೆಯನ್ನು ಪ್ರಚೋದಿಸುತ್ತಿರುವುದು ಖೇದಕರ. ಈ ನಿಟ್ಟಿನಲ್ಲಿ ಕ್ರಿಶ್ಚಿಯನ್ ಸಮುದಾಯದ ಸಂರಕ್ಷಣೆಗೆ ನ್ಯಾಯಾಂಗ ವ್ಯವಸ್ಥೆ ಮುಂದಾಗಲಿ ಎಂದು ಅವರು ತಿಳಿಸಿದರು.