ಭೋಪಾಲ್ : ಮಧ್ಯಪ್ರದೇಶದಲ್ಲಿ ಬಿಜೆಪಿ ಬೆಂಬಲಿಗ ಸಂಘಟನೆಗಳಿಂದ ಕೋಮು ಸೌಹಾರ್ಧತೆ ಕೆಡಿಸುವ ಕೆಲವು ಘಟನೆಗಳು ಕಳೆದ ಒಂದೆರಡು ವಾರಗಳಲ್ಲಿ ಮತ್ತೆ ವರದಿಯಾಗುತ್ತಿವೆ. ಕಳೆದ ವಾರ ಮಧ್ಯ ಪ್ರದೇಶದ ದೊರನ ಗ್ರಾಮ, ಉಜ್ಜೈನಿ ಮತ್ತು ಇಂದೋರ್ ನಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸುವುದಕ್ಕೆ ಸಂಬಂಧಿಸಿ ನಡೆದ ಮೆರವಣಿಗೆಗಳು ಘರ್ಷಣೆಗೆ ಕಾರಣವಾದ ಬಗ್ಗೆ ವರದಿಗಳಾಗಿವೆ.
ಅದರಲ್ಲೂ ದೊರನ ಗ್ರಾಮದಲ್ಲಿ ಮೆರವಣಿಗೆ ವೇಳೆ ಮಸೀದಿಯೊಂದರ ಬಳಿ ಜೋರಾಗಿ ಧ್ವನಿವರ್ಧಕ ಬಳಸಿದ್ದಕ್ಕಾಗಿ ನಡೆದ ವಾಗ್ವಾದದ ಪರಿಣಾಮ, ಮಸೀದಿಯ ಗೋಪುರಕ್ಕೆ ಹತ್ತಿ ಕೇಸರಿ ಧ್ವಜ ಹಾಕಲಾಗಿದೆ. ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ, ಅಲ್ಲಿನ ಮುಸ್ಲಿಮರು ಗ್ರಾಮವನ್ನೇ ತೊರೆದಿದ್ದು, ಗ್ರಾಮಕ್ಕೆ ಮರಳಲು ಹಿಂದೇಟು ಹಾಕಿದ್ದಾರೆ.
ಮಧ್ಯಪ್ರದೇಶದ ಮಾಂಡ್ಸೌರ್ ಜಿಲ್ಲೆಯ ದೊರನ ಗ್ರಾಮದ ಮನೆಗಳ ಕಿಟಕಿ, ಬಾಗಿಲುಗಳನ್ನು ಮುರಿಯಲಾಗಿದೆ. ‘ಜೈ ಶ್ರೀಮ್’ ಎಂದು ಬರೆಯಲಾಗಿದೆ. ಹೀಗಾಗಿ ಗ್ರಾಮಸ್ಥರು ತಮ್ಮ ಮನೆಗಳಿಗೆ ಮರಳಲು ಭಯಭಿತರಾಗಿದ್ದಾರೆ. ವಿಶ್ವ ಹಿಂದೂ ಪರಿಷತ್ (ವಿಎಚ್ ಪಿ)ಯ ಸುಮಾರು 5,000 ಕಾರ್ಯಕರ್ತರು ಮಂಗಳವಾರ ಗ್ರಾಮದಲ್ಲಿ ಮೆರವಣಿಗೆ ನಡೆಸಿ, ದಾಂಧಲೆ ನಡೆಸಿದ್ದರೂ, ಪೊಲೀಸರು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
ದೊರನದಲ್ಲಿ ಕೇಸರಿ ಧ್ವಜಗಳೊಂದಿಗೆ ದೊಡ್ಡ ಸಂಖ್ಯೆಯಲ್ಲಿ ಸೇರುವಂತೆ ವಾಟ್ಸಪ್ ನಲ್ಲಿ ಸಂದೇಶಗಳು ಹರಿದಾಡಿದ್ದವು. ಹೀಗಾಗಿ ರಕ್ಷಣೆ ನೀಡುವಂತೆ ಪೊಲೀಸ್ ವರಿಷ್ಠಾಧಿಕಾರಿಗೆ ಸ್ಥಳೀಯ ಮುಸ್ಲಿಮರು ಮನವಿ ಮಾಡಿದ್ದಾರೆ.
ಡಿ.25ರಂದು ಸ್ಥಳೀಯ ಮಸೀದಿಯ ಬಳಿ ಜೋರಾದ ಸಂಗೀತ ಧ್ವನಿವರ್ಧಕ ಬಳಸಿ ಹಾಕಲಾಗಿತ್ತು. ಇದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಯಾಗಿ ಮಂಗಳವಾರ ಗ್ರಾಮದಲ್ಲಿ ರ್ಯಾಲಿ ಆಯೋಜಿಸಲಾಗಿತ್ತು. ಈ ವೇಳೆ ಅದೇ ಮಸೀದಿಯ ಮೇಲೆ ಹತ್ತಿ ಅದರ ಮೇಲೆ ಕೇಸರಿ ಧ್ವಜ ಹಾರಿಸಲಾಗಿದೆ. ರ್ಯಾಲಿಯ ಬಳಿಕ ಪೊಲೀಸರು ಈ ಧ್ವಜವನ್ನು ತೆರವುಗೊಳಿಸಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸುವ ಜಾಗೃತಿ ಮೂಡಿಸುವುದಕ್ಕಾಗಿ ಬಿಜೆಪಿ ಬೆಂಬಲಿತ ಸಂಘಟನೆಗಳು ಮಂಗಳವಾರ ಆಯೋಜಿಸಿದ್ದ ಈ ರ್ಯಾಲಿಯಲ್ಲಿ ಘರ್ಷಣೆ ಉಂಟಾಗಿದೆ.
ಕಳೆದ ವಾರ ಉಜ್ಜೈನಿ ಮತ್ತು ಇಂದೋರ್ ನಲ್ಲೂ ಇದೇ ಮಾದರಿಯ ಘರ್ಷಣೆಗಳಾಗಿವೆ. ದೊರೊನದಲ್ಲಿ ಘರ್ಷಣೆ ನಡೆದ ದಿನವೇ ಉಜ್ಜೈನಿಯ ಬೇಗಮ್ ಬಾಗ್ ನಲ್ಲೂ ಇಂತಹುದೇ ಮೆರವಣಿಗೆ ಆಯೋಜಿಸಲಾಗಿತ್ತು. ಈ ವೇಳೆ ಅಲ್ಲೂ ಕಲ್ಲು ತೂರಾಟ ನಡೆದು, ಘರ್ಷಣೆಗೆ ಕಾರಣವಾಗಿತ್ತು. ಡಿ.29ರಂದು ಇಂದೋರ್ ನ ಚಂದನ್ ಖೇಡಿ ಗ್ರಾಮದಲ್ಲೂ ಎರಡೂ ಸಮುದಾಯಗಳ ಗುಂಪುಗಳಿಂದ ಕಲ್ಲುತೂರಾಟ ನಡೆದಿದೆ. ಬೆಂಕಿ ಹಚ್ಚಲಾದ ಬಗ್ಗೆಯೂ ದೂರುಗಳು ದಾಖಲಾಗಿವೆ.
ಫೋಟೊ ಕೃಪೆ : ಇಂಡಿಯನ್ ಎಕ್ಸ್ ಪ್ರೆಸ್ ಡಾಟ್ ಕಾಂ