ಭೋಪಾಲ್: ಮಧ್ಯಪ್ರದೇಶದ ರತ್ಲಂ ಜಿಲ್ಲೆಯಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ ಪ್ರಯುಕ್ತ ದುರ್ಗಾದೇವಿಗೆ ಸ್ತುತಿಸಿ ಪ್ರದರ್ಶಿಸುವ ಪೆಂಡಲ್ ಗೆ ಹಿಂದೂಯೇತರರಿಗೆ ಪ್ರವೇಶ ನಿರ್ಬಂಧಿಸಿ ವಿಶ್ವ ಹಿಂದೂ ಪರಿಷತ್ (ವಿ.ಎಚ್.ಪಿ) ಪೋಸ್ಟರ್ ಅಭಿಯಾನವನ್ನು ಆಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷದ ವಿವಾದಾತ್ಮಕ ಘಟನೆಗಳು ಮರುಕಳಿಸುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಮುಂದಾಗಿದೆ ಎಂದು ಪಿ.ಎಚ್.ಪಿ ಸ್ಪಷ್ಟಪಡಿಸಿದೆ.
ವಿಶ್ವ ಹಿಂದೂ ಪರಿಷನ್ ನ ಧರ್ಮ ಪ್ರಚಾರ ವಿಭಾಗದ ಜಿಲ್ಲಾ ಕಾರ್ಯದರ್ಶಿ ಚಂದನ್ ಶರ್ಮಾ, ಹಿಂದೂಯೇತರ ಪುರುಷರು ದುರ್ಗಾದೇವಿಯನ್ನು ಸ್ತುತಿಸಿ ನೃತ್ಯ ಮಾಡುವ ಗರ್ಬಾ ಪೆಂಡಲ್ ಪ್ರವೇಶಿಸುವುದು ಆಕ್ಷೇಪಾರ್ಹ ಚಟುವಟಿಕೆ ಎಂದು ಹೇಳಿದ್ದಾರೆ. ಹಿಂದೂ ಯುವಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿ.ಎಚ್.ಪಿ ಪೋಸ್ಟರ್ ಅಭಿಯಾನ ನಡೆಸಲಿದೆ ಎಂದು ಹೇಳಿದರು.
ಈ ಸಂಬಂಧ ಜಿಲ್ಲಾಡಳಿತಕ್ಕೆ ಯಾವುದೇ ದೂರು ಬಂದಿಲ್ಲ ಎಂದು ರತ್ಲಾಮ್ ಸಬ್ ಡಿವಿಝನ್ ಮ್ಯಾಜಿಸ್ಟ್ರೇಟ್ ಅಭಿಷೇಕ್ ಗೆಹ್ಲೋಟ್ ತಿಳಿಸಿದ್ದಾರೆ.