ಚೆನ್ನೈ: ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದ) ಪಕ್ಷದ ಹಿರಿಯ ಮುಖಂಡ, ಮಾಜಿ ರಾಜ್ಯ ಕಾರ್ಯದರ್ಶಿ ಕೋಡಿಯೇರಿ ಬಾಲಕೃಷ್ಣನ್ (68) ಚೆನ್ನೈನಲ್ಲಿ ನಿಧನರಾಗಿದ್ದಾರೆ. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಬಾಲಕೃಷ್ಣನ್, 2019ರಿಂದಲೂ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಕೇರಳದ ಹಿರಿಯ ರಾಜಕೀಯ ನಾಯಕರಾಗಿದ್ದ ಬಾಲಕೃಷ್ಣನ್, ಸಿಪಿಎಂ ಪಾಲಿಟ್ ಬ್ಯೂರೋ ಸದಸ್ಯರಾಗಿದ್ದರು. ತಲಶ್ಯೇರಿ ವಿಧಾನಸಭೆಯಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಬಾಲಕೃಷ್ಣನ್, ವಿ. ಅಚ್ಯುತಾನಂದನ್ ಸರ್ಕಾರದಲ್ಲಿ (2006-11) ಗೃಹ ಮತ್ತು ಪ್ರವಾಸೋದ್ಯಮ ಸಚಿವರಾಗಿ ಸೇವೆ ಸಲ್ಲಿಸಿದ್ದರು. ವಿಧಾನಸಭೆಯಲ್ಲಿ ಎರಡು ಬಾರಿ (2001-04 ಮತ್ತು 2011-16) ವಿರೋಧ ಪಕ್ಷದ ಉಪ ನಾಯಕನಾಗಿದ್ದರು.
ಮಾರ್ಚ್‌ನಲ್ಲಿ ಕೊಚ್ಚಿಯಲ್ಲಿ ನಡೆದಿದ್ದ ಪಕ್ಷದ ರಾಜ್ಯ ಕಾರ್ಯಕಾರಿಣಿಯಲ್ಲಿ ಸತತ ಮೂರನೇ ಬಾರಿಗೆ ಬಾಲಕೃಷ್ಣನ್ ಅವರನ್ನು ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಅನಾರೋಗ್ಯದ ಕಾರಣ ಈ ಪ್ರಮುಖ ಹುದ್ದೆಯನ್ನು ಅವರು ಎಂವಿ. ಗೋವಿಂದನ್ ಅವರಿಗೆ ಹಸ್ತಾಂತರಿಸಿದ್ದರು.