ಚಿತ್ರೀಕರಣದ ವೇಳೆ ಹೃದಾಯಾಘಾತ: ಹಿರಿಯ ನಟ ವಿ.ಪಿ ಖಾಲಿದ್ ನಿಧನ

Prasthutha|

ಕೊಚ್ಚಿ: ಮಲಯಾಳಂನ ಹಿರಿಯ ನಟ, ಗಾಯಕ ವಿ.ಪಿ ಖಾಲಿದ್ ಹೃದಾಯಾಘಾತದಿಂದ ನಿಧನರಾಗಿದ್ದಾರೆ. ಮಝವಿಲ್ ಮನೋರಮಾ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಹಾಸ್ಯ ಸರಣಿ ʼಮರಿಮಾಯಂʼನಲ್ಲಿ ಸುಮೇಶ್ ಪಾತ್ರದ ಮೂಲಕ ಭಾರಿ ಜನಪ್ರಿಯತೆ ಪಡೆದಿದ್ದರು.

- Advertisement -


ಕೊಟ್ಟಾಯಂನ ವೈಕಮ್ ಎಂಬಲ್ಲಿ ಟೊವಿನೋ ಥೋಮಸ್ ನಾಯಕನಾಗಿ ಅಭಿನಯಿಸುತ್ತಿರುವ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಖಾಲಿದ್, ಊಟ ಮಾಡಿದ ಬಳಿಕ ಶೌಚಾಲಯಕ್ಕೆ ತೆರಳಿದ್ದರು. ಆದರೆ ಬಹಳ ಹೊತ್ತಾದರೂ ಹೊರ ಬಾರದೇ ಇರುವುದನ್ನು ಗಮನಿಸಿದ ಸಹಾಯಕ ಸಿಬ್ಬಂದಿ ಬಾಗಿಲು ತೆರೆದು ನೋಡಿದಾಗ ಮೂರ್ಚೆ ಹೋದ ಸ್ಥಿತಿಯಲ್ಲಿದ್ದರು. ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಹೃದಾಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ದೃಢೀಕರಿಸಿದ್ದಾರೆ. ಸದ್ಯ ಮೃತದೇಹವನ್ನು ವೈಕಮ್ನ ಇಂಡೋ-ಅಮೆರಿಕನ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ.


ಖ್ಯಾತ ಗಾಯಕರಾಗಿದ್ದ ಖಾಲಿದ್, ಸಿನಿಮಾ, ಧಾರವಾಹಿಗಳ ಜೊತೆಗೆ ನಾಟಕಗಳ ಮೂಲಕ ರಂಗಭೂಮಿಯಲ್ಲೂ ಸಕ್ರೀಯರಾಗಿದ್ದರು. ಅಲೆಪ್ಪಿ ಥಿಯೇಟರ್ಸ್ನ ಡ್ರಾಕುಲಾ ವಿ, ತಿರುಮುರಿವು, ಕೊಚ್ಚಿನ್ ಸನಾತನದ ಎಝುನ್ನೆಲ್ಲತ್ತು ಖಾಲಿದ್ ನಟಿಸಿದ ಪ್ರಮುಖ ನಾಟಕಗಳಾಗಿವೆ. ಫೋರ್ಟ್ ಕೊಚ್ಚಿ ಚುಳ್ಳಿಕ್ಕಲ್ ಮೂಲದವರಾದ ಖಾಲಿದ್, 1973 ರಲ್ಲಿ ಬಿಡುಗಡೆಯಾದ ಪಿಜೆ ಆಂಟೋನಿ ನಿರ್ದೇಶನದ ಪೆರಿಯಾರ್ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದರ್ಪಣೆ ಮಾಡಿದ್ದ ಖಾಲಿದ್, ಏಣಿ, ಪೊನ್ನಪುರಂ ಕೋಟೆ ಮುಂತಾದ ಹಿಟ್ ಚಿತ್ರಗಳಲ್ಲೂ ನಟಿಸಿದ್ದರು. ಹಲವಾರು ವರ್ಷಗಳಿಂದ ದೂರದರ್ಶನ ಸರಣಿಗಳಲ್ಲಿ ನಟಿಸುತ್ತಿದ್ದರು.
ಮಕ್ಕಳಾದ ನಿರ್ದೇಶಕ ಖಾಲಿದ್ ರಹ್ಮಾನ್, ಛಾಯಾಗ್ರಾಹಕರಾದ ಶೈಜು ಖಾಲಿದ್ ಮತ್ತು ಜಿಮ್ಶಿ ಖಾಲಿದ್ ಅವರನ್ನು ಖಾಲಿದ್ ಅಗಲಿದ್ದಾರೆ.

Join Whatsapp