ಇಂದಿನಿಂದ ಹರೇಕಳ-ಅಡ್ಯಾರ್ ಸೇತುವೆಯಲ್ಲಿ ವಾಹನಗಳ ಸಂಚಾರ

Prasthutha|

►ಇನ್ಮುಂದೆ ಮಂಗಳೂರು ಪ್ರಯಾಣ ಹತ್ತಿರ…

- Advertisement -

ಉಳ್ಳಾಲ: ಇಂದಿನಿಂದ ಹರೇಕಳದಿಂದ ರಾಷ್ಟ್ರೀಯ ಹೆದ್ದಾರಿ 75ರ ಅಡ್ಯಾರ್-ಕಣ್ಣೂರಿಗೆ ನೇರ ಸಂಪರ್ಕ ಕಲ್ಪಿಸುವ ಸೇತುವೆಯಲ್ಲಿ ದ್ವಿಚಕ್ರ, ತ್ರಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನಗಳ ಸಂಚಾರ ಆರಂಭಗೊಳ್ಳಲಿದೆ.

ರಾಜ್ಯ ವಿಧಾನಸಭೆ ಚುನಾವಣೆಗೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಈ ಸೇತುವೆಯನ್ನು ಸ್ಥಳೀಯ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಸುವಂತಿಲ್ಲ. ಆದರೆ ಗ್ರಾಮಸ್ಥರು ಸೇತುವೆಯ ಬಳಕೆಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿಕೊಂಡ ಮೇರೆಗೆ ಅಧಿಕಾರಿಗಳು ಮನವಿಗೆ ಸ್ಪಂದಿಸಿ ಅವಕಾಶ ಕಲ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭ 200 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿತ್ತು. ಹರೇಕಳ ನೇತ್ರಾವತಿ ನದಿಯಲ್ಲಿ ಹರಿಯುವ ಸಿಹಿನೀರು ತಡೆದು ಉಳ್ಳಾಲ ಭಾಗಕ್ಕೆ ನಿರಂತರ ನೀರು ಸರಬರಾಜು ಮಾಡುವುದು, ಹರೇಕಳ-ಅಡ್ಯಾರ್ ರಾಷ್ಟ್ರೀಯ ಹೆದ್ದಾರಿಗೆ ನೇರ ಸಂಪರ್ಕ ಕಲ್ಪಿಸುವುದು ಯೋಜನೆಯ ಉದ್ದೇಶವಾಗಿತ್ತು.

2019ರ ಮಾರ್ಚ್ ತಿಂಗಳಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಬಳಿಕ ಕೋವಿಡ್, ಲಾಕ್‌ ಡೌನ್ ಪರಿಣಾಮ ಸೇತುವೆ ಕಾಮಗಾರಿಯೂ ನಿಂತಿತು. ಆರೇಳು ತಿಂಗಳ ಬಳಿಕ ಮತ್ತೆ ಕಾಮಗಾರಿ ಆರಂಭಗೊಂಡು ಶರವೇಗ ಪಡೆಯಿತು. ಈ ಯೋಜನೆಯಿಂದ ಹಲವು ಗ್ರಾಮದ ಜನರಿಗೆ ಮಂಗಳೂರು ಪ್ರಯಾಣ ಅತ್ಯಂತ ಸಮೀಪವಾಗಲಿದೆ.



Join Whatsapp