ನವದೆಹಲಿ: ಭಾರತದಲ್ಲಿ ವಾಹನ ಚಿಲ್ಲರೆ ಮಾರಾಟ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸೆಪ್ಟೆಂಬರ್ ನಲ್ಲಿ ಶೇಕಡ 9ರಷ್ಟು ಕುಸಿತ ಕಂಡಿದೆ.
ಪ್ರಯಾಣಿಕ ವಾಹನಗಳಿಗೆ ಬೇಡಿಕೆ ಗಣನೀಯವಾಗಿ ಕುಸಿದಿರುವುದು ಇದಕ್ಕೆ ಕಾರಣದ ಎಂದು ಡೀಲರ್ ಗಳ ಸಂಘಟನೆಯಾದ ಎಫ್ಎಡಿಎ ಹೇಳಿದೆ.
2023ರ ಸೆಪ್ಟೆಂಬರ್ ನಲ್ಲಿ 19 ಲಕ್ಷ ವಾಹನಗಳು ನೋಂದಣಿಯಾಗಿದ್ದರೆ, ಕಳೆದ ತಿಂಗಳು ಕೇವಲ 17.2 ಲಕ್ಷ ವಾಹನಗಲು ನೋಂದಾಯಿಸಲ್ಪಟ್ಟಿವೆ.
ಪ್ರಯಾಣಿಕ ವಾಹನಗಳು ಮತ್ತು ದ್ವಿಚಕ್ರ ವಾಹನಗಳು ಸೇರಿದಂತೆ ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಗತಿ ಕುಂಠಿತವಾಗಿದೆ.
ಗಣೇಶ ಚತುರ್ಥಿ, ಓಣಂನಂಥ ಹಬ್ಬದ ಸೀಸನ್ ಹೊರತಾಗಿಯೂ, ಸಾಧನೆ ಬಹುತೇಕ ಸ್ಥಗಿತವಾದಂತಾಗಿದೆ ಎಂದು ಫೆಡರೇಷನ್ ಆಫ್ ಅಟೋಮೊಬೈಲ್ ಡೀಲರ್ಸ್ ಅಸೋಸಿಯೇಶನ್ ಅಧ್ಯಕ್ಷ ಸಿ.ಎಸ್.ವಿಘ್ನೇಶ್ವರ ಹೇಳಿದ್ದಾರೆ. ವರ್ಷದ ಹಿಂದೆ 3,39,543 ಪ್ರಯಾಣಿಕ ವಾಹನಗಳು ಮಾರಾಟವಾಗಿದ್ದರೆ, ಕಳೆದ ತಿಂಗಳು ಇದು 2,75,681ಕ್ಕೆ ಇಳಿದು, ಶೇಕಡ 19ರಷ್ಟು ಇಳಿಕೆ ದಾಖಲಿಸಿದೆ.