ಲಖನೌ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಬಿಜೆಪಿ ಬುಧವಾರ 30 ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಪಕ್ಷದ ಸಂಸದರಾದ ಮೇನಕಾ ಗಾಂಧಿ ಮತ್ತು ವರುಣ್ ಗಾಂಧಿ ಅವರನ್ನು ಪಟ್ಟಿಯಿಂದ ಹೊರಗಿಡಲಾಗಿದೆ.
ಇವರಿಬ್ಬರು ಸುಲ್ತಾನ್ ಪುರ ಮತ್ತು ಪಿಲಿಭಿತ್ ನಿಂದ ಹಲವು ಬಾರಿ ವಿಜಯಶಾಲಿಯಾಗಿದ್ದರು. ಇತ್ತೀಚೆಗಷ್ಟೇ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯಲ್ಲಿಯೂ ಇಬ್ಬರನ್ನು ಆ ಪಟ್ಟಿಯಿಂದ ಕೈಬಿಡಲಾಗಿತ್ತು. ಮುಂಬರುವ ಉತ್ತರ ಪ್ರದೇಶ ಚುನಾವಣೆಯ ಮೊದಲ ಹಂತದಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡುವ 30 ನಾಯಕರ ಪಟ್ಟಿಯನ್ನು ಬಿಜೆಪಿ ಇಂದು ಬಿಡುಗಡೆ ಮಾಡಿತ್ತು. ಆ ಪಟ್ಟಿಯಲ್ಲಿ ಮೊದಲ ಹೆಸರು ಪ್ರಧಾನಿ ನರೇಂದ್ರ ಮೋದಿ, ನಂತರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೆಸರಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಮತ್ತು ಗೋರಖ್ ಪುರದ ಬಿಜೆಪಿ ಅಭ್ಯರ್ಥಿ ಯೋಗಿ ಆದಿತ್ಯನಾಥ ಕೂಡ ಆ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿದ್ದಾರೆ.