ಹೊಸದಿಲ್ಲಿ: ರಷ್ಯಾ ಮತ್ತು ಉಕ್ರೇನ್ ನಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ವಿದ್ಯಾರ್ಥಿಗಳು ಸೇರಿದಂತೆ ಯುದ್ಧಗ್ರಸ್ತ ಪ್ರದೇಶದಲ್ಲಿ ಸಿಲುಕಿರುವ ಅನೇಕ ಭಾರತೀಯರನ್ನು ಮರಳಿ ತಾಯ್ನಾಡಿಗೆ ಕರೆ ತರಲು ವಿಲಂಬವಾಗುತ್ತಿರುವ ಕುರಿತಂತೆ ಬಿಜೆಪಿ ಸಂಸದ ವರುಣ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿನಿಯೊಬ್ಬಳು ಭಾರತ ಸರ್ಕಾರ ನಮಗೆ ಯಾವುದೇ ನೆರವನ್ನೂ ನೀಡಿಲ್ಲ, ನಮ್ಮ ಕರೆಗಳಿಗೂ ರಾಯಭಾರ ಕಛೇರಿ ಸಿಬ್ಬಂದಿಗಳು ಸ್ಪಂದಿಸುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿರುವ ವಿಡಿಯೋವನ್ನು ಟ್ವಿಟರಿನಲ್ಲಿ ಹಂಚಿಕೊಂಡಿರುವ ಸಂಸದ ವರುಣ್ ಗಾಂಧಿ, ಪ್ರತಿ ದುರಂತವನ್ನೂ ‘ಅವಕಾಶ’ಗಳನ್ನಾಗಿ ಬಳಸಬಾರದೆಂದು, ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಟೀಕಿಸಿದ್ದಾರೆ.
ವರುಣ್ ಗಾಂಧಿ ಹಂಚಿರುವ ವಿಡಿಯೋದಲ್ಲಿ, ಭಾರತೀಯ ವಿದ್ಯಾರ್ಥಿನಿಯೊಬ್ಬಳು, “ಕೇಂದ್ರ ಸರಕಾರ ತಮ್ಮನ್ನು ಮರಳಿ ಕರೆ ತರಲು ‘ಏನನ್ನೂ ಮಾಡುತ್ತಿಲ್ಲ’, ನಾವು ರಾಯಭಾರ ಕಛೇರಿ ಸಿಬ್ಬಂದಿಗಳಿಗೆ ಕರೆ ಮಾಡಿದರೆ ಅವರು ಸ್ವೀಕರಿಸುತ್ತಿಲ್ಲ. ನಾವು ಉಕ್ರೇನ್ ಗಡಿಗಿಂತ 800 ಕಿಮೀ ದೂರದಲ್ಲಿದ್ದೇವೆ, ಅಧಿಕೃತ (ಸರ್ಕಾರಿ) ಸಹಾಯವಿಲ್ಲದಿದ್ದರೆ ಗಡಿ ದಾಟಲು ಸಾಧ್ಯವಿಲ್ಲ, ಆದರೂ ಸರ್ಕಾರ ಏನೂ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಳು.