ಲಕ್ನೋ: ಹಿರಿಯ ನಾಯಕ ವರುಣ್ ಗಾಂಧಿ ಬಿಜೆಪಿ ತೊರೆಯುವ ಕುರಿತು ಪಕ್ಷದ ಮುಖಂಡರು ಶಂಕೆ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ಅವರ ಹೇಳಿಕೆಗಳು ಬಿಜೆಪಿಯೊಂದಿಗೆ ಹೊಂದಾಣಿಕೆಯಾಗುತ್ತಿಲ್ಲ ಎಂಬುದು ಪಕ್ಷದ ಮುಖಂಡರ ಅಭಿಪ್ರಾಯ.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಕಂಗನಾ ರಣಾವತ್ ವಿರುದ್ಧದ ಹೇಳಿಕೆಯನ್ನು ಖಂಡಿಸಿ ಟ್ವೀಟ್ ಮಾಡಿದ್ದ ವರುಣ್ ಗಾಂಧಿ, ಪರೋಕ್ಷವಾಗಿ ಬಿಜೆಪಿಯ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದರು.
ಮಾತ್ರವಲ್ಲ ಈ ಹಿಂದೆ ಧರಣಿ ನಿರತ ರೈತರನ್ನು ಬೆಂಬಲಿಸಿ ಮಾತನಾಡಿದ್ದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ರೈತರನ್ನು ಬೆಂಬಲಿಸಿ ಮಾಡಿದ ಭಾಷಣದ ತುಣುಕನ್ನು ಟ್ವೀಟ್ ಮಾಡಿ ಬಿಜೆಪಿಯನ್ನು ಮುಜುಗರಕ್ಕೆ ಸಿಲುಕಿಸಿದ್ದರು.
ಕಳೆದ ತಿಂಗಳು ಲಖಿಂಪುರ ಘಟನೆಯನ್ನು ಉಲ್ಲೇಖಿಸಿ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರಾ ಮತ್ತ್ತು ಪುತ್ರ ಅಶಿಶ್ ಮಿಶ್ರಾ ವಿರುದ್ಧ ವರುಣ್ ಗಾಂಧಿ ಅವರ ನಿಲುವು ಬಿಜೆಪಿ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಪ್ರಸಕ್ತ ನಡೆದ ಮಹತ್ವದ ಬೆಳವಣಿಗೆಯೊಂದರಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯಿಂದ ವರುಣ್ ಗಾಂಧಿಯನ್ನು ಬಿಜೆಪಿ ಕೈಬಿಡುವ ಮೂಲಕ ಅವರಿಗೆ ಸಡ್ಡು ಹೊಡೆದಿತ್ತು.
ಈ ಎಲ್ಲಾ ಅಂಶಗಳನ್ನು ಅವಲೋಕಿಸಿದರೆ ಶೀಘ್ರದಲ್ಲೇ ವರುಣ್ ಅವರು ಬಿಜೆಪಿ ತೊರೆಯಲಿದ್ದಾರೆ ಎಂಬ ಶಂಕೆಯನ್ನು ಮುಖಂಡರು ವ್ಯಕ್ತಪಡಿಸಿದ್ದಾರೆ.