ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ತನಿಖೆಯಲ್ಲಿ ವ್ಯವಸ್ಥಿತ ಸಂಚು ನಡೆದಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ, ಡಿಸಿಎಂ ಹೆಸರು ಹೇಳಿ ಎಂದು ಒತ್ತಡ ಹಾಕಲಾಗುತ್ತಿದೆ. ಹಣ ಬಳ್ಳಾರಿ ಚುನಾವಣೆಗೆ ಬಳಕೆಯಾಗಿದೆ ಅಂತಾ ಹೇಳಲು ಒತ್ತಡ ಹಾಕಲಾಗುತ್ತಿದೆ ಎಂದು ದೂರಿದ್ದಾರೆ.
ಬೋವಿ ನಿಗಮದಲ್ಲಿ 120 ಕೋಟಿ ಹಗರಣ ಆಗಿದೆ. ಅದರ ಬಗ್ಗೆ ಇ.ಡಿ ಯಾಕೆ ಕಾಳಜಿ ವಹಿಸಿಲ್ಲ? ದೇವರಾಜ ಅರಸು ಟ್ರಕ್ ಟರ್ಮಿನಲ್ ಪ್ರಕರಣದಲ್ಲಿ ಇ.ಡಿ ಯಾಕೆ ಗಮನ ಹರಿಸಿಲ್ಲ. ಕೆಐಎಡಿಬಿ ದುಡ್ಡು ಸೇಲಂಗೆ ಹೋಗಿದೆ. ಇದರ ಬಗ್ಗೆ ಯಾಕೆ ಇ.ಡಿ ಆಸಕ್ತಿ ವಹಿಸಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯವರ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸಿಜರ್ ಇದು. ಕಳೆದ 10 ವರ್ಷಗಳಲ್ಲಿ ಎಷ್ಟು ಸರ್ಕಾರಗಳನ್ನು ಬಿಜೆಪಿಯವರು ಬೀಳಿಸಿದ್ದಾರೆ ನೋಡಿ. 2016ರಲ್ಲಿ ಉತ್ತರಾಖಂಡ, 2019ರಲ್ಲಿ ಕರ್ನಾಟಕ, ಗುಜರಾತ್ನಲ್ಲಿ ನಮ್ಮ ಎಂಎಲ್ಎಗಳ ಖರೀದಿ ಮಾಡಿದ್ರು. ಸಿಕ್ಕಿಂನಲ್ಲಿ ಎಂಎಲ್ ಎಗಳ ಖರೀದಿ. 2014 ರಿಂದ 440 ಎಂಎಲ್ಎಗಳನ್ನು ಖರೀದಿ ಮಾಡಲಾಗಿದೆ. ಮೆಜಾರಿಟಿ ಇದ್ರೂ ಕೂಡ ಕೇಂದ್ರದ ಏಜೆನ್ಸಿಗಳನ್ನು ಬಳಸಿಕೊಂಡು ಸರ್ಕಾರಗಳನ್ನು ಕೆಡವಲಾಗುತ್ತಿದೆ ಎಂದು ಟೀಕಿಸಿದ್ದಾರೆ