ಹೃದಯಾಘಾತದಿಂದ ಮೃತಪಟ್ಟಿದ್ದ ವೈಷ್ಣವಿಯ ನೇತ್ರದಾನ; ಈಡೇರಿದ ಮನೆಮಂದಿಯ ಮನದಾಸೆ

Prasthutha|

ಮೂಡಿಗೆರೆ: ಕಳೆದ ಶನಿವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದ ವೈಷ್ಣವಿಯ ನೇತ್ರದಾನಕ್ಕೆ ಕುಟುಂಬದವರು ಒಪ್ಪಿಗೆ ನೀಡಿದ್ದ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ರೋಟರಿ ಇನ್ನರ್‌ವೀಲ್‌ ಟ್ರಸ್ಟ್‌ ಜೀವನ್‌ ಸಂಧ್ಯಾ ಸಂಸ್ಥೆ ನೇತೃತ್ವದಲ್ಲಿ ಪ್ರಕ್ರಿಯೆ ನಡೆಸಿ ನೇತ್ರ ಸಂಗ್ರಹಿಸಲಾಗಿದೆ.

- Advertisement -

‘ವಿದ್ಯಾರ್ಥಿನಿಯ ಎರಡು ಕಣ್ಣುಗಳನ್ನು ತೆಗೆದು ನೇತ್ರ ಬ್ಯಾಂಕ್‌ಗೆ ಕಳುಹಿಸಲು ನೀಡಲಾಯಿತು’ ಎಂದು ನೇತ್ರ ತಜ್ಞೆ ಡಾ.ವೃಂದಾ ಅವರು ತಿಳಿಸಿದರು.

‘ಕೋಲ್ಡ್‌ ಪ್ಯಾಕೇಜ್‌ನಲ್ಲಿ ನೇತ್ರಗಳನ್ನು ಶನಿವಾರ ರಾತ್ರಿಯೇ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬೆಂಗಳೂರಿನ ಲಯನ್ಸ್‌ ನೇತ್ರ ಬ್ಯಾಂಕ್‌ಗೆ  ರವಾನಿಸಲಾಯಿತು. ನೇತ್ರಗಳನ್ನು ಸುಸೂತ್ರವಾಗಿ ಬ್ಯಾಂಕ್‌ ಗೆ ತಲುಪಿಸಲಾಗಿದೆ’ ಎಂದು ರೋಟರಿ ಇನ್ನರ್‌ವೀಲ್‌ ಟ್ರಸ್ಟ್‌ ಜೀವನ್‌ ಸಂಧ್ಯಾ ಸಂಸ್ಥೆ ಮುಖ್ಯಸ್ಥ ಕಿರಣ್‌ ತಿಳಿಸಿದರು.

- Advertisement -

‘ಮುಂಜಾನೆ 4.15ರ ಹೊತ್ತಿಗೆ ಕೋಲ್ಡ್‌ ಪ್ಯಾಕೇಜ್‌ ಬಾಕ್ಸ್‌ ತಂದು ಕೊಟ್ಟರು. ಬೆಳಿಗ್ಗೆ 9.45ಕ್ಕೆ ಬೆಂಗಳೂರಿನಲ್ಲಿ ಸಂಬಂಧಪಟ್ಟವರಿಗೆ ಅದನ್ನು ತಲುಪಿಸಲಾಯಿತು’ ಎಂದು ಬಸ್‌ ಚಾಲಕ ಹರೀಶ್‌ ತಿಳಿಸಿದರು.

ವೈಷ್ಣವಿ ಮೃತಪಟ್ಟ ಕೂಡಲೇ ಆಕೆಯ ಪೋಷಕರು ನೇತ್ರದಾನಕ್ಕೆ ಮುಂದಾಗಿದ್ದರು. ಆದರೆ ಕೆಲವೊಂದು ಸಾಂಕೇತಿಕ ಅಡಚಣೆಗಳಿಂದಾಗಿ ನೇತ್ರದಾನ ಪ್ರಕ್ರಿಯೆಯು ಮೊಟಕುಗೊಳ್ಳುವ ಹಂತದಲ್ಲಿತ್ತು.   ಪಟ್ಟಣ ಪಂಚಾಯಿತಿ ಸದಸ್ಯ ಮನೋಜ್ ಕುಮಾರ್ ಸೇರಿದಂತೆ ಹಲವರು ಹಾಸನ, ಶಿವಮೊಗ್ಗ, ತುಮಕೂರು, ಬೆಂಗಳೂರಿನ ನೇತ್ರ ಬ್ಯಾಂಕ್ ಗೆ ಕರೆ ಮಾಡಿ ನೇತ್ರ ಪಡೆದುಕೊಳ್ಳುವಂತೆ ಮನವಿ ಮಾಡಿದರು. ಆದರೆ, ಸಿಬ್ಬಂದಿ ಕೊರತೆ, ದೂರದ ಪ್ರದೇಶ ಮುಂತಾದ ಕಾರಣ  ಹೇಳಿದ ಆಸ್ಪತ್ರೆಯ ಸಿಬ್ಬಂದಿ ನೇತ್ರವನ್ನು ಪಡೆದುಕೊಳ್ಳಲು ನಿರಾಕರಿಸಿದ್ದರು.

ಸ್ಥಳೀಯ ಜನಪ್ರತಿನಿಧಿಗಳು, ಸಂಘಸಂಸ್ಥೆಗಳ ಪದಾಧಿಕಾರಿಗಳ ಒತ್ತಡಕ್ಕೆ ಮಣಿದು ತಡರಾತ್ರಿ ಒಂದು ಗಂಟೆಯ ಸುಮಾರಿಗೆ ಚಿಕ್ಕಮಗಳೂರಿನಿಂದ ಬಂದ ವೈದ್ಯರ ತಂಡವು ಎಂಜಿಎಂ ಆಸ್ಪತ್ರೆ ವೈದ್ಯರ ನೆರವಿನಲ್ಲಿ ಕಣ್ಣನ್ನು ಪಡೆದುಕೊಂಡು ಆಂಬುಲೆನ್ಸ್ ನಲ್ಲಿ ಚಿಕ್ಕಮಗಳೂರಿಗೆ ಒಯ್ಯಲಾಯಿತು.



Join Whatsapp