ಮಕ್ಕಳಿಗೆ  JE ವ್ಯಾಕ್ಸಿನ್ ಹಾಕಿಸಿ, ವದಂತಿಗೆ ಕಿವಿಗೊಡಬೇಡಿ: ದ.ಕ ಜಿಲ್ಲಾ ಆರೋಗ್ಯಾಧಿಕಾರಿ

Prasthutha|

ಮಂಗಳೂರು: ಮೆದುಳುಜ್ವರ ತಡೆಗಟ್ಟಲು  ಡಿಸೆಂಬರ್ 5ರಿಂದ JE ಲಸಿಕೆ ಅಭಿಯಾನ ಪ್ರಾರಂಭಿಸಿದ್ದು , ಕಡ್ಡಾಯವಾಗಿ 1 ರಿಂದ 15 ವಯಸ್ಸಿನ ಒಳಗಿನ ಮಕ್ಕಳು ಲಸಿಕೆಯನ್ನು ಪಡೆದುಕೊಳ್ಳಬೇಕೆಂದು ದ.ಕ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ಮನವಿ ಮಾಡಿದ್ದಾರೆ.

- Advertisement -

“ಪ್ರಸ್ತುತ” ನ್ಯೂಸ್ ಜೊತೆ ಮಾತಾಡಿದ ಡಾ. ಕಿಶೋರ್, ಮೆದುಳು ಜ್ವರವೆಂಬುದು ಒಂದು ವೈರಾಣು ಕಾಯಿಲೆಯಾಗಿದ್ದು, ಹಂದಿ ಮತ್ತು ವಲಸೆ ಹಕ್ಕಿಗಳ ಮೂಲಕ ಹರಡುವುದಾಗಿದೆ. ಇದು ಕ್ಯೂಟಿಕ್ಸ್ ಜಾತಿಯ ಸೊಳ್ಳೆಯಿಂದ ಮನುಷ್ಯರಿಗೆ ಪಸರಿಸುತ್ತದೆ. ಜ್ವರ, ತಲೆನೋವು, ಕತ್ತಿನ ಭಾಗದಲ್ಲಿ ನೋವು, ವಾಂತಿ ಮತ್ತು ಅಪಸ್ಮಾರವು ಈ ರೋಗದ ಲಕ್ಷಣವಾಗಿದ್ದು, ರೋಗ ಆಧಿಕ್ಯತೆಯಿಂದ ಕೆಲವೊಮ್ಮೆ ಮರಣ ಸಂಭವವೂ ಇದೆ. ಆದರೆ ಯಾರೂ ಭಯಪಡದೆ ಮಕ್ಕಳಿಗೆ  JE ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕಾಗಿ ವಿನಂತಿಸಿದ್ದಾರೆ.

ಹಲವು ಕಡೆ JE ವ್ಯಾಕ್ಸಿನ್ ಸಂಬಂಧಿತವಾಗಿ ಹಲವಾರು ವದಂತಿಗಳು ಕೇಳಿ ಬರುತ್ತಿದ್ದು, ಸಾರ್ವಜನಿಕರು ಗೊಂದಲಕ್ಕೊಳಗಾಗಬಾರದು. ಇಂಜೆಕ್ಷನ್ ಕೊಟ್ಟ ತಕ್ಷಣ ತಲೆಸುತ್ತಿ ಬೀಳುತ್ತಾರೆ ಎಂಬ ಸುದ್ದಿ ಹರಡುತ್ತಿದ್ದು, ವಿಶೇಷವಾಗಿ ಈ ವ್ಯಾಕ್ಸಿನ್’ಗೂ ಅದಕ್ಕೂ ಸಂಬಂಧವಿಲ್ಲ. ಅದು ಸಾಮಾನ್ಯವಾಗಿ ಮಕ್ಕಳಲ್ಲಿ ಕಂಡುಬರುವಂತಹ ಲಕ್ಷಣಗಳಾಗಿವೆ. ಆದ್ದರಿಂದ ಯಾರೂ ಅಂತಹ ವದಂತಿಗೆ ಕಿವಿಕೊಟ್ಟು ಲಸಿಕೆಯನ್ನು ತಪ್ಪಿಸಬಾರದು ಎಂದು ಹೇಳಿದ್ದಾರೆ.

- Advertisement -

ಸಮೀಕ್ಷೆಯ ಪ್ರಕಾರ ದ.ಕ. ಜಿಲ್ಲೆಯಲ್ಲಿ 1 ವರ್ಷದಿಂದ 15 ವರ್ಷದ ಒಳಗಿನ 4,73,000 ಮಕ್ಕಳಿದ್ದು ಮೂರು ಹಂತಗಳಲ್ಲಿ ನಾವು ಲಸಿಕೆ ಅಭಿಯಾನ ನಡೆಸುತ್ತಿದ್ದೇವೆ. ಮೂರು ವಾರಗಳ ಕಾಲ ನಡೆಯುವ ಈ ಅಭಿಯಾನ ಮೊದಲ ಹಂತದಲ್ಲಿ ಶಾಲೆಯಲ್ಲಿ ನಡೆಯುತ್ತದೆ. ನಂತರ ಒಂದೊಂದು ಊರಿನಲ್ಲಿ ನಡೆಯುತ್ತದೆ. ಈ ವ್ಯಾಕ್ಸಿನ್ ಬಗ್ಗೆ ಯಾವುದಾದರೂ ಸಂಶಯವಿದ್ದರೆ ಸಮೀಪ ಆರೋಗ್ಯಾಧಿಕಾರಿಗಳೊಂದಿಗೆ ಅಥವಾ ತಮ್ಮ ಫ್ಯಾಮಿಲಿ ಡಾಕ್ಟರ್ ಬಳಿ ಸಂಪರ್ಕಿಸಿ ಅಭಿಪ್ರಾಯ ಪಡೆದುಕೊಳ್ಳಬಹುದು ಎಂದು ಕಿಶೋರ್ ಹೇಳಿದರು.



Join Whatsapp