ಬೀಜಿಂಗ್: ಉಯಿಘರ್ ಮುಸ್ಲಿಮರ ಹಕ್ಕುಗಳ ಉಲ್ಲಂಘನೆಯ ಹಿನ್ನೆಲೆಯಲ್ಲಿ ಕಳವಳ ವ್ಯಕ್ತಪಡಿಸಿ ಮತ್ತು ರಾಷ್ಟ್ರೀಯ ಭದ್ರತೆಗೆ ಧಕ್ಕೆ ಹಿನ್ನೆಲೆಯಲ್ಲಿ ಬ್ರಿಟನ್ ತನ್ನ ರಕ್ಷಣಾ ಇಲಾಖೆ ಮತ್ತು ಪೊಲೀಸ್ ಪಡೆಗಳಲ್ಲಿ ಚೀನಾ ಒಡೆತನದ ಕಣ್ಗಾವಲು ವ್ಯವಸ್ಥೆಗಳನ್ನು ಬದಲಾಯಿಸಿದೆ.
ಅಲ್ಲದೇ ಪ್ರಮುಖ ಸರಕಾರಿ ಕಚೇರಿಯಲ್ಲೂ ಚೀನಾ ಒಡೆತನದ ಟೆಕ್ ಕಂಪನಿಗಳು ಒದಗಿಸಿದ ಭದ್ರತಾ ಸಾಧನಗಳನ್ನು ಬದಲಾಯಿಸಲಾಗಿದೆ.
ಸಿಸಿಟಿವಿ ಕಣ್ಗಾವಲು ಕಂಪೆನಿಗಳಾದ Hikvision ಮತ್ತು Dahua ಚೀನಾದ ಕ್ಸಿನ್ಜಿಯಾಂಗ್ನಲ್ಲಿ ಅಲ್ಲಿನ ಉಯಿಘರ್ ಮುಸ್ಲಿಮರ ದಮನದಲ್ಲಿ ಪಾಲ್ಗೊಂಡಿದೆ ಎಂದು ಆರೋಪಿಸಿರುವ ಇತರ ಹಕ್ಕು ಸಂರಕ್ಷಣಾ ಗುಂಪುಗಳು, ಬ್ರಿಟನ್ನಾದ್ಯಂತ ಈ ಕಂಪೆನಿಗಳನ್ನು ನಿಷೇಧಿಸುವಂತೆ ಪ್ರಚಾರ ಮಾಡುತ್ತಿದೆ. ಅಲ್ಲದೇ Hikvision ಮತ್ತು Dahua ಕ್ಯಾಮೆರಾಗಳನ್ನು ಉಯಿಘರ್ ಪ್ರದೇಶದಾದ್ಯಂತ ಕಾನ್ಸಂಟ್ರೇಶನ್ ಕ್ಯಾಂಪ್ಗಳಲ್ಲಿ ಬಳಸಲಾಗುತ್ತದೆ ಎಂದು ‘ಏಷ್ಯನ್ ಲೈಟ್’ ವರದಿ ಮಾಡಿದೆ.
ಚೀನಾ ಸರ್ಕಾರವು ಅಲ್ಪಸಂಖ್ಯಾತರಿಗೆ ಕಿರುಕುಳ ನೀಡುತ್ತಿದೆ ಹಾಗೂ ವಿಶ್ವದಾದ್ಯಂತ ಸರಕಾರಿ ಇಲಾಖೆಗಳು ಮತ್ತು ಸಂಶೋಧನಾ ಕೇಂದ್ರಗಳ ಮೇಲೆ ಆಕ್ರಮಣ ಮಾಡುತ್ತಿದೆ ಎಂದು ಬ್ರಿಟಿಷ್ ಸಂಸದರು ಆರೋಪಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಅಲ್ಲದೆ ಚೀನಾ ನೆರೆಯ ರಾಷ್ಟ್ರಗಳ ಪ್ರಾದೇಶಿಕ ಸಮಗ್ರತೆಯನ್ನು ಉಲ್ಲಂಘಿಸುತ್ತಿದೆ ಎಂದೂ ಬ್ರಿಟಿಷ್ ಸಂಸದರು ಆರೋಪಿಸಿದ್ದಾರೆ.
ಬ್ರಿಟನ್ನ ಗೃಹ ಕಚೇರಿ, ಆರೋಗ್ಯ ಮತ್ತು ಸಾಮಾಜಿಕ ಕಾಳಜಿ ಇಲಾಖೆ, ಕೆಲಸ ಮತ್ತು ಪಿಂಚಣಿ ಇಲಾಖೆ ಮತ್ತು ನ್ಯಾಯ ಇಲಾಖೆಗೆ ಸೇರಿದ ಕಚೇರಿಗಳು ಚೀನಾ ನಿರ್ಮಿತ ಭದ್ರತಾ ಸಾಧನಗಳನ್ನು ಬದಲಾಯಿಸಿವೆ.
ಚೀನಾದ ಕ್ಸಿನ್ಜಿಯಾಂಗ್ನಲ್ಲಿ ಉಯಿಘರ್ ಮುಸ್ಲಿಮರು ಮತ್ತು ಇತರ ತುರ್ಕಿ ಅಲ್ಪಸಂಖ್ಯಾತರ ಮೇಲೆ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದು, ಇವರು ಚಿತ್ರಹಿಂಸೆ ಮತ್ತು ಬಲವಂತದ ದುಡಿಮೆಗೆ ಒಳಗಾಗಿದ್ದಾರೆ. ಅಲ್ಲದೇ ಅವರ ಭಾಷಾ, ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂಪ್ರದಾಯಗಳ ನಿರ್ಮೂಲನೆಯೂ ನಡೆಯುತ್ತಿದೆ.