ಲಖನೌ: ತಂದೆಯೊಬ್ಬ ತನ್ನ ಮಗಳ ರುಂಡ ಕತ್ತರಿಸಿರುವ ಭಯಾನಕ ಘಟನೆ ಉತ್ತರ ಪ್ರದೇಶದ ಹರದೋಯಿ ಜಿಲ್ಲೆಯ ಮಾಜ್ ಹಿಲಾದಲ್ಲಿ ನಡೆದಿದೆ. 17 ವರ್ಷದ ಮಗಳು ಪ್ರೇಮಿಯ ಜತೆ ಇದ್ದುದನ್ನು ಕಂಡ ಸರ್ವೇಶ್ ಕುಮಾರ್ ಎಂಬಾತ ಈ ಕೃತ್ಯ ಎಸಗಿದ್ದಾನೆ. ಮಗಳ ರುಂಡವನ್ನು ಛೇದಿಸಿ ಅದರ ಸಹಿತವಾಗಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ಎನ್ ಡಿ ಟಿವಿ ವರದಿ ಮಾಡಿದೆ.
ತರಕಾರಿ ಮಾರಾಟ ಮಾಡುವ ಸರ್ವೇಶ್ ಕುಮಾರ್ ಮಗಳು ಯುವಕನೊಂದಿಗೆ ಸಂಬಂಧ ಹೊಂದಿದ್ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದ. ನಿನ್ನೆ ಸುಮಾರು ಮೂರು ಗಂಟೆಯ ಹೊತ್ತಿಗೆ ಮಗಳು ಪ್ರಿಯತಮನ ಜತೆಗೆ ಇರುವುದನ್ನು ಕಂಡು ಸಿಟ್ಟುಗೊಂಡಿದ್ದಾನೆ. ಇದರಿಂದ ಆಕ್ರೋಶಗೊಂಡ ಆತ ಹರಿತವಾದ ಚಾಕು ತಂದು ಮಗಳ ತಲೆ ಕತ್ತರಿಸಿದ್ದಾನೆ! ಕತ್ತರಿಸಿದ ಮಗಳ ತಲೆಯೊಂದಿಗೆ ಎರಡು ಕಿಲೋಮೀಟರ್ ದೂರದ ಪೊಲೀಸ್ ಠಾಣೆಗೆ ನಡೆದುಕೊಂಡು ಹೋಗಿ ಪೊಲೀಸರಿಗೆ ಶರಣಾಗಿದ್ದಾನೆ. ಈತ ಹೀಗೆ ಹೋಗುತ್ತಿರುವುದನ್ನು ನೋಡಿದ ಜನ ಬೆಚ್ಚಿಬಿದ್ದಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮಗಳಿಗೆ ಈ ರೀತಿಯ ಸಂಬಂಧ ಇರುವುದನ್ನು ತಿಳಿದು ಸಿಟ್ಟಿನಿಂದ ಇಂಥದ್ದೊಂದು ಘನಘೋರ ಕೃತ್ಯ ಎಸಗಿರುವುದಾಗಿ ಪೊಲೀಸರು ಹೇಳಿದ್ದಾರೆ.
“ನಾನೇ ಕೊಂದಿದ್ದೇನೆ. ಬೇರೆ ಯಾರೂ ಇರಲಿಲ್ಲ. ಮನೆಯಲ್ಲಿ ಬಾಗಿಲು ಹಾಕಿ ಚೂಪಾದ ಚಾಕುವಿನಿಂದ ತಲೆ ಕತ್ತರಿಸಿದ್ದೇನೆ. ನನ್ನ ಮಗಳ ದೇಹ ಮನೆಯಲ್ಲಿದೆ” ಎಂದು ಸಾವಾಧಾನವಾಗಿ ಹೇಳಿದ್ದಾನೆ. ನಂತರ ಆತನನ್ನು ಪೊಲೀಸರು ಬಂಧಿಸಿದ್ದಾರೆ.
“ಸರ್ವೇಶ್ ಎಂಬ ವ್ಯಕ್ತಿಯು ತನ್ನ ಮಗಳ ತಲೆಕಡಿದು ಕೊಲೆ ಮಾಡಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಅಲ್ಲದೇ ಮೃತಳ ತಲೆಯನ್ನು ಸಮರ್ಪಕವಾಗಿ ಸಾಗಿಸದ ಕಾರಣಕ್ಕೆ ಪೊಲೀಸ್ ಪೇದಯೊಬ್ಬನನ್ನು ಸಹ ಅಮಾನತ್ತು ಮಾಡಿದ್ದೇವೆ” ಎಂದು ಪೊಲೀಸ್ ಅಧಿಕಾರಿ ಕಪಿಲ್ ದಿಯೊ ತಿಳಿಸಿದ್ದಾರೆ.
ರಾಷ್ಟ್ರೀಯ ಅಪರಾಧ ವರದಿ ಬ್ಯೂರೋ ಪ್ರಕಾರ 2019ರಲ್ಲಿ ಮಹಿಳೆಯರ ಮೇಲಿನ ಅಪರಾಧಗಳಲ್ಲಿ ಉತ್ತರ ಪ್ರದೇಶದಲ್ಲಿಯೇ ಅತಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ಅಲ್ಲದೇ ಮಕ್ಕಳ ಮೇಲಿನ ಪೋಕ್ಸೋ ಪ್ರಕರಣಗಳಲ್ಲಿಯೂ ಸಹ ಉತ್ತರ ಪ್ರದೇಶವೇ (7,444) ಮುಂದಿದೆ. ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ದಿನೇ ದಿನೇ ಹದಗೆಡುತ್ತಿದೆ. ಹಲ್ಲೆ, ಕೊಲೆ, ಅತ್ಯಾಚಾರದಂತಹ ಘಟನೆಗಳು ಪ್ರತಿದಿನ ಸಾಮಾನ್ಯವಾಗಿವೆ.