ಉತ್ತರಾಖಂಡ: ಇಲ್ಲಿನ ನಿರ್ಮಾಣ ಹಂತದ ಸಿಲ್ಕ್ಯಾರಾ ಸುರಂಗದಲ್ಲಿ ಕಾರ್ಮಿಕರು ಸಿಲುಕಿದ್ದ ಸಮಯದಲ್ಲಿ ಕಾರ್ಮಿಕರೋರ್ವರ ಕುಟುಂಬದ ದುಸ್ಥಿತಿಯನ್ನು ವರದಿ ಮಾಡಿದ ಪತ್ರಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಜಾರ್ಖಾಂಡ್‌ನ ಸ್ಥಳೀಯ ಇಬ್ಬರು ಪತ್ರಕರ್ತರ ವಿರುದ್ಧ ಜಾರ್ಖಂಡ್‌ನ ಖುಂತಿ ಜಿಲ್ಲೆಯಲ್ಲಿ ಪ್ರಕರಣ ದಾಖಲಾಗಿದೆ.
ಅನ್ಸಾರಿ ಮತ್ತು ಕುಮಾರ್ ತಮ್ಮ ವರದಿಗಳ ಮೂಲಕ ವಿಜಯ್ ಹೊರೋ ಕುಟುಂಬದ ದುಸ್ಥಿತಿಯನ್ನು ಎತ್ತಿ ತೋರಿಸಿದ್ದರು. ನ.12ರಂದು ಸುರಂಗ ಕುಸಿತದ ಎರಡು ವಾರಗಳ ನಂತರ ಆಡಳಿತವು ಬಡ ಕುಟುಂಬಕ್ಕೆ ಪಡಿತರವನ್ನು ಒದಗಿಸಿದೆ ಎಂದು ಅವರು ತಮ್ಮ ವರದಿಗಳಲ್ಲಿ ಆರೋಪಿಸಿದ್ದರು.
ಬ್ಲಾಕ್ ಡೆವಲಪ್‌ಮೆಂಟ್ ಅಧಿಕಾರಿ ಸ್ಮಿತಾ ನಾಗೇಸಿಯಾ ಮತ್ತು ವೃತ್ತ ಅಧಿಕಾರಿ ವಂದನಾ ಭಾರತಿ ಅವರು ದೂರು ನೀಡಿದ್ದು, ಅದರ ಆಧಾರದ ಮೇಲೆ ಕರ್ರಾ ಪೊಲೀಸ್ ಠಾಣೆಯಲ್ಲಿ ಪತ್ರಕರ್ತ ಸೋನು ಅನ್ಸಾರಿ ಮತ್ತು ಯೂಟ್ಯೂಬರ್ ಗುಂಜನ್ ಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತೋರ್ಪಾ ಉಪವಿಭಾಗೀಯ ಪೊಲೀಸ್ ಅಧಿಕಾರಿ ಓಂಪ್ರಕಾಶ್ ತಿವಾರಿ ಹೇಳಿದ್ದಾರೆ.
ಅವರು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ ಮತ್ತು ಅಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಅಧಿಕಾರಿಗಳು ಕಾರ್ಮಿಕನ ಮನೆಗೆ ಭೇಟಿ ನೀಡಿದಾಗ, ಇಬ್ಬರು ವರದಿಗಾರರು ಆಗಲೇ ಅಲ್ಲಿದ್ದರು. ಅವರು ಸತ್ಯವನ್ನು ಪರಿಶೀಲಿಸದೆ ರೆಕಾರ್ಡಿಂಗ್ ಪ್ರಾರಂಭಿಸಿದರು. ಸತ್ಯಾಸತ್ಯತೆಯನ್ನು ಪರಿಶೀಲಿಸುವಂತೆ ಕೇಳಿದಾಗ ಅವರು ನಮ್ಮ ಕೆಲಸಕ್ಕೆ ಅಡ್ಡಿಪಡಿಸಿ ನಮ್ಮೊಂದಿಗೆ ಅನುಚಿತವಾಗಿ ವರ್ತಿಸಿದರು ಎಂದು ನ.30ರಂದು ದಾಖಲಿಸಿದ ಪೊಲೀಸ್ ದೂರಿನಲ್ಲಿ ಆರೋಪಿಸಲಾಗಿದೆ.
ಸಿಆರ್‌ಪಿಸಿಯ ನಿಬಂಧನೆಗಳ ಪ್ರಕಾರ ಇಬ್ಬರಿಗೂ ನೋಟಿಸ್ ನೀಡಲಾಗುವುದು ಮತ್ತು ಅವರ ಹೇಳಿಕೆಗಳನ್ನು ದಾಖಲಿಸಲಾಗುತ್ತಿದೆ. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿವಾರಿ ಹೇಳಿದ್ದಾರೆ.