ಲಕ್ನೋ: ಉತ್ತರ ಪ್ರದೇಶದ ಬುಲಂದ್‌ಶಹರ್ ಸ್ಮಶಾನದಲ್ಲಿ ಮೇಲ್ಜಾತಿಯವರು ಬಳಸುವ ಪ್ರದೇಶವನ್ನು ದಲಿತರು ಬಳಸದಂತೆ ತಡೆಯಲು ಅಧಿಕಾರಿಗಳು ಸ್ಮಶಾನಕ್ಕೆ ಅಡ್ಡಲಾಗಿ ಮುಳ್ಳುತಂತಿ ಬೇಲಿ ನಿರ್ಮಿಸಿ ಜಾತಿ ತಾರತಮ್ಯ ಮಾಡಿದ್ದಾರೆ.
ಆದರೆ ಇದೀಗ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮುಳ್ಳುತಂತಿ ಬೇಲಿಯನ್ನು ತೆಗೆದುಹಾಕಲಾಗಿದೆ.
ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಗ್ರಾಮದ ವ್ಯಾಪ್ತಿಗೆ ಒಳಪಡುವ ಶಿಕಾರ್‌ಪುರದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ವೇದ ಪ್ರಿಯಾ ಆರ್ಯ ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಬ್ಲಾಕ್ ಡೆವಲಪ್‌ಮೆಂಟ್ ಆಫೀಸರ್ ಗಣಶ್ಯಾಂ ವರ್ಮಾ ಹೇಳಿದ್ದಾರೆ. ಹಲವಾರು ವರ್ಷಗಳಿಂದ ಜನಸಂಖ್ಯೆಯಲ್ಲಿ ಶೇಕಡಾ 20 ರಷ್ಟಿರುವ ಗ್ರಾಮದ ದಲಿತರಿಗೆ ಸ್ಮಶಾನವನ್ನು ಬಳಸಲು ಅವಕಾಶವಿರಲಿಲ್ಲ.
2018 ರಲ್ಲಿ ಸರ್ಕಾರವು ಅದರ ಸುತ್ತಲೂ ಕಾಂಕ್ರೀಟ್ ಗೋಡೆಯನ್ನು ನಿರ್ಮಿಸಿತ್ತು. ನಂತರ ದಲಿತರು ಸ್ಮಶಾನವನ್ನು ಬಳಸಲು ಪ್ರಾರಂಭಿಸಿದಾಗ ಮೇಲ್ಜಾತಿಯವರು ವಿರೋಧಿಸಿದ್ದರು. ನಂತರ ಸ್ಮಶಾನವನ್ನು ಎರಡು ವಿಭಾಗಗಳಾಗಿ ವಿಂಗಡಿಸಿ ಮುಳ್ಳುತಂತಿ ಬೇಲಿಯನ್ನು ನಿರ್ಮಿಸಲಾಗಿದೆ.ಈವರೆಗೆ ಯಾವುದೇ ದೂರು ಬಂದಿಲ್ಲವಾದ್ದರಿಂದ ಘಟನೆಯ ಬಗ್ಗೆ ಎಫ್‌ಐಆರ್ ದಾಖಲಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.