ಉತ್ತರ ಪ್ರದೇಶ | ಮಹಿಳೆಯರ ಮೇಲೆ ಪೊಲೀಸ್ ದೌರ್ಜನ್ಯದ ವೀಡಿಯೋ ವೈರಲ್; ನೆಟ್ಟಿಗರಿಂದ ವ್ಯಾಪಕ ಆಕ್ರೋಶ

Prasthutha|

ಲಕ್ನೋ: ಉತ್ತರ ಪ್ರದೇಶದ ಪೊಲೀಸರು ಮಹಿಳೆಯರ ಮೇಲೆ ಲಾಠಿ ಚಾರ್ಜ್ ನಡೆಸುತ್ತಿರುವ ವೀಡಿಯೋವೊಂದು ವೈರಲ್ ಆಗಿದ್ದು, ನೆಟ್ಟಿಗರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ವೈರಲ್ ಆಗುತ್ತಿರುವ ವೀಡಿಯೋ ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯ ಜಲಾಲ್’ಪುರದ್ದು ಎಂದು ಹೇಳಲಾಗುತ್ತಿದ್ದು, ಪೊಲೀಸರು ಈ ಆರೋಪವನ್ನು ನಿರಾಕರಿಸಿದ್ದಾರೆ.

- Advertisement -

ಮಹಿಳೆಯರು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ ಪರಿಣಾಮ ಲಘು ಲಾಠಿ ಚಾರ್ಜ್ ಮೂಲಕ ಪರಿಸ್ಥಿತಿಯನ್ನು ಹತೋಟಿಗೆ ತರಬೇಕಾಯಿತು ಎಂದು ಪೊಲೀಸರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಬಿ.ಆರ್. ಅಂಬೇಡ್ಕರ್ ಪ್ರತಿಮೆಯನ್ನು ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸಿದ ಮಹಿಳೆಯರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಅಂಬೇಡ್ಕರ್ ಪ್ರತಿಮೆ ಇರುವ ಭೂಮಿಯು ವಿವಾದಕ್ಕೆ ಕಾರಣವಾಗಿತ್ತು.

- Advertisement -

ಅಂಬೇಡ್ಕರ್ ಪ್ರತಿಮೆಯನ್ನು ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಘಟನಾ ಸ್ಥಳದಲ್ಲಿ ಮಹಿಳೆಯರ ಗುಂಪೊಂದು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಮಹಿಳಾ ಪ್ರತಿಭಟನಕಾರರನ್ನು ಚದುರಿಸಲು ಮುಂದಾಗಿದ್ದರು ಎಂದ ಪೊಲೀಸರು, ಕೆಲವು ಪ್ರತಿಭಟನಕಾರರು ಪೊಲೀಸರ ಮೇಲೆ ಕಲ್ಲುತೂರಾಟ ಆರಂಭಿಸಿದ್ದರು ಎಂದು ತಿಳಿಸಿದ್ದಾರೆ.

ಈ ಮಧ್ಯೆ ಮತ್ತೊಂದು ವೀಡಿಯೋದಲ್ಲಿ ಕೆಲವು ಮಹಿಳೆಯರು ಮಹಿಳಾ ಪೊಲೀಸ್ ಸಿಬ್ಬಂದಿಯ ಕೂದಲು ಎಳೆದಾಡಿ ಹಲ್ಲೆ ನಡೆಸುತ್ತಿರುವುದು ಸೆರೆಯಾಗಿದೆ.

ಕೆಲವು ಪ್ರತಿಭಟನಕಾರರು ಪೊಲೀಸ್ ಕಾರಿನ ಮೇಲೆ ದಾಳಿ ಮಾಡಿ ಧ್ವಂಸಗೊಳಿಸಿದ ಬಳಿಕ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರಲು ಲಘು ಲಾಠಿ ಚಾರ್ಜ್ ಮಾಡಬೇಕಾಯಿತು ಎಂದು ಅಂಬೇಡ್ಕರ್ ನಗರ ಪೊಲೀಸ್ ಅಧಿಕಾರಿ ಅಜಿತ್ ಕುಮಾರ್ ಸಿನ್ಹಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Join Whatsapp